ಮದ್ದೂರು: ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವುದರಿಂದ ಮಕ್ಕಳು ಸುಲಭವಾಗಿ ವಿಚಾರಗಳನ್ನು ಗ್ರಹಿಸುವುದರ ಜತೆಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಬಹಳ ಅವಕಾಶಗಳಿವೆ ಎಂದು ಕೋಣಸಾಲೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸೋಮಶೇಖರ್ ಹೇಳಿದರು.
ತಾಲೂಕಿನ ಕೋಣಸಾಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ.ಚಂದು ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಆಂಗ್ಲಭಾಷೆಯ ವ್ಯಾಮೋಹದಿಂದ ಪಾಲಕರು ಮಕ್ಕಳಿಗೆ ಮಾನಸಿಕವಾಗಿ ಒತ್ತಡ ಹೇರುತ್ತಿದ್ದು, ಇದರಿಂದ ನೈಜ ಪ್ರತಿಭೆ ಹೊರಬರಲು ಸಾಧ್ಯವಾಗುತ್ತಿಲ್ಲ. ಆದರೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಮಕ್ಕಳು ಅತ್ಯುತ್ತಮ ಹುದ್ದೆಗೇರಿರುವುದನ್ನು ನಾವು ಕಾಣಬಹುದಾಗಿದೆ ಎಂದರು. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿರುವ ಕನ್ನಡ ಭಾಷೆ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು, ಮಕ್ಕಳು ಕೀಳರಿಮೆ ಬಿಟ್ಟು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಬೇಕು ಎಂದರು.
ಶಿಕ್ಷಣ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೆ.ಟಿ.ಚಂದು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಎಚ್.ಎಸ್.ರವಿಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಶೇಖರ್, ಗ್ರಾಮದ ಮುಖಂಡರಾದ ಕೆಂಪಣ್ಣ, ಪುಟ್ಟಸ್ವಾಮಿ, ಸಿದ್ದರಾಮು, ರಾಜು, ದಯಾನಂದ, ಪ್ರೇಮಾನಂದ, ಕುಮಾರ್, ಸುನೀಲ್‌ಕುಮಾರ್, ನಿಂಗೇಗೌಡ, ಶಿಕ್ಷಕರಾದ ವೆಂಕಟರಾಯಪ್ಪ, ರವಿ, ಸುರೇಶ್, ಡಾ.ಮಲ್ಲಿಕೇಶ, ಶೋಭಾ, ಶ್ವೇತಾ, ನಂದಿನಿ, ರೂಪಾ ಇತರರಿದ್ದರು.