ಜಿಲ್ಲೆ

ಗುರಿ ಸಾಧಿಸಲು ಛಲದಿಂದ ವ್ಯಾಸಂಗ ಮಾಡಿ: ಮಾಜಿ ಮೇಯರ್ ಶಿವಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ

ಆರ್.ಕೃಷ್ಣ

ಮೈಸೂರು: ಜೀವನದಲ್ಲಿ ಗುರಿ ಇಟ್ಟುಕೊಂಡು ಆ ಗುರಿ ಸಾಧನೆ ಮಾಡಲು ಛಲದಿಂದ ವ್ಯಾಸಂಗ ಮಾಡಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ನಾಯಕರ ಯುವ ಸೇನೆಯಿಂದ ವಿಜಯನಗರದಲ್ಲಿರುವ ವಾಲ್ಮೀಕಿ ಭವನದಲ್ಲಿ ಭಾನುವಾರ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದ ನಾಯಕ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಸೂಕ್ತ ಮಾರ್ಗದರ್ಶನ ಇಲ್ಲದೆ ಜನಾಂಗದಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ ಇತ್ತು. ಹಿಂದುಳಿದ ಜನಾಂಗದ ವಿದ್ಯಾರ್ಥಿಗಳಿಗಾಗಿ ಈಗ ಸಾಕಷ್ಟು ಅವಕಾಶಗಳು ಇದ್ದು, ಅವುಗಳನ್ನು ಸರಿಯಾಗಿ ತಿಳಿದು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ದೆಸೆಯಿಂದಲೇ ಯಾವುದಾದರೂ ಸ್ಪಷ್ಟ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವತ್ತ ಮುನ್ನಡೆಯಬೇಕು. ಉನ್ನತ ಸ್ಥಾನಕ್ಕೆ ಏರಿದ ಬಳಿಕ ಸಮಾಜದ ಋಣವನ್ನು ತೀರಿಸಬೇಕು ಎಂದರು.
ಅರಣ್ಯ ವಸತಿ ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ ಮಾತನಾಡಿ, ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಯುವ ಜನತೆ ದಿಕ್ಕು ತಪ್ಪುತ್ತಿದ್ದಾರೆ. ಇದರಿಂದ ನಿಮ್ಮ ಪಾಲಕರು ಕಂಡ ಕನಸು ಈಡೇರುತ್ತಿಲ್ಲ. ಮುಂದೆ ನೀವು ಕೂಡ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಅಧ್ಯಕ್ಷ ದೇವರಾಜ್ ಟಿ.ಕಾಟೂರು ಮಾತನಾಡಿ, ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ಕಳೆದ 21 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳು, ಸಮಾಜದ ಗಣ್ಯರು, ಉನ್ನತ ಸ್ಥಾನದಲ್ಲಿ ಇರುವವರನ್ನು ಗೌರವಿಸಿಕೊಂಡು ಬರಲಾಗುತ್ತಿದೆ. ಜನಾಂಗದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಸಹಕಾರ ನೀಡಬೇಕು ಎಂದು ಕೋರಿದರು.
ಐಎಫ್‌ಎಸ್ ಅಗಿ ಆಯ್ಕೆಯಾಗಿರುವ ಚಿದಾನಂದ ಅವರನ್ನು ಗೌರವಿಸಲಾಯಿತು. ಶಾಸಕ ಕೆ.ಹರೀಶ್‌ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜು, ನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ಮುಖಂಡರಾದ ದ್ಯಾವಪ್ಪ ನಾಯಕ, ಮಾಂತೇಶಪ್ಪ, ಉದ್ದೂರು ಚಿಕ್ಕಣ್ಣ, ಕಬಿನಿ-ಕಾವೇರಿ ಭೂ ಸ್ವಾಧೀನಾಧೀಕಾರಿ ಸುಪ್ರಿಯಾ, ವೆಂಕಟೇಶ್ ಇತರರು ಇದ್ದರು.