ಮಂಡ್ಯ: ಸಕ್ಕರೆನಾಡಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆಲವೇ ದಿನವಷ್ಟೇ ಬಾಕಿ ಇದೆ. ಇಡೀ ಜಿಲ್ಲೆಯೇ ನುಡಿಜಾತ್ರೆಗೆ ಆಹ್ವಾನ ನೀಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ನಡುವೆ ತಾಲೂಕಿನ ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ವಿನೂತನ ಪ್ರಯೋಗ ಸೆಳೆಯುತ್ತಿದೆ. 700ಕ್ಕೂ ಹೆಚ್ಚು ಪತ್ರ ಬರೆದು ಅಕ್ಷರಜಾತ್ರೆಗೆ ಬರುವಂತೆ ಪ್ರೀತಿಯಿಂದ ಮಾಡಿರುವ ಮನವಿ ವಿಶೇಷ ಎನಿಸುತ್ತಿದೆ.
ನಗರದ ಹೊರವಲಯದಲ್ಲಿ ಡಿ.20ರಿಂದ 22ರವರೆಗೆ ನಡೆಯಲಿರುವ ಅಕ್ಷರ ಜಾತ್ರೆಗೆ ಸ್ಥಳ ನಿಗದಿಯಾಗಿದೆ. ಇದು ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಅರಿವು ಕೇಂದ್ರದ ಗ್ರಂಥಪಾಲಕ ಯೋಗೇಶ್ ನೇತೃತ್ವದಲ್ಲಿ 700ಕ್ಕೂ ಹೆಚ್ಚು ಪತ್ರ ಬರೆದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ. ಇದಕ್ಕೆ ಸ್ಪಂದನೆಯೂ ಸಿಕ್ಕಿದ್ದು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿ ಪತ್ರವೂ ಬಂದಿದೆ.
ಉಮ್ಮಡಳ್ಳಿಯ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಸಂಘದ ಸದಸ್ಯರು, ಗ್ರಾಪಂ ಆಡಳಿತ ಮಂಡಳಿಯಿಂದ ಪತ್ರ ಬರೆಸಲಾಗಿದೆ. ಪ್ರಧಾನಮಂತ್ರಿ, ರಾಜ್ಯಪಾಲ, ಮುಖ್ಯಮಂತ್ರಿ, ಡಿಸಿಎಂ, ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ, ಮಂಡ್ಯ ಶಾಸಕರು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತ, ಡಿಡಿಪಿಐ, ಬಿಇಒಗಳು, ಎಲ್ಲ ಜಿಲ್ಲೆಯ ಡಿಸಿ, ಜಿಪಂ ಸಿಇಒ, 170 ವಿಕೇಂದ್ರೀಕೃತ ತಾಪಂ ತರಬೇತಿ ಸಂಯೋಜಕರು, 170 ಅರಿವು ಕೇಂದ್ರದ ಗ್ರಂಥಪಾಲಕರು ಸೇರಿದಂತೆ ಹಲವರಿಗೆ ಪತ್ರ ಬರೆಯಲಾಗಿದೆ. ತೆರೆದ ಹಾಗೂ ಫೋಸ್ಟ್ ಕಾರ್ಡ್‌ನಲ್ಲಿ ಆಹ್ವಾನ ನೀಡಲಾಗಿದೆ. ಈ ಪತ್ರಕ್ಕೆ ವಿಶೇಷ ಡಿಸೈನ್ ಮಾಡಲಾಗಿದೆ.
ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಪತ್ರ ಬರೆಯುತ್ತಿದ್ದೇನೆ. ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯಲ್ಲಿ ಮೂರನೇ ಬಾರಿಗೆ ಸಮ್ಮೇಳನ ನಡೆಯುತ್ತಿದೆ. ಇದು ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿಯೇ ನಡೆಯುತ್ತಿರುವುದರಿಂದ ನಿಮ್ಮನ್ನು ಗೌರವ ಪೂರ್ವಕವಾಗಿ ಆಹ್ವಾನ ನೀಡುತ್ತಿದ್ದೇನೆ. ಬನ್ನಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸುಮಾರು ಎರಡು ತಿಂಗಳ ಪ್ರಯತ್ನದಿಂದ 700ಕ್ಕೂ ಹೆಚ್ಚು ಪತ್ರಗಳನ್ನು ಬರೆಸಲಾಗಿದೆ. ವಿದ್ಯಾರ್ಥಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸಂಘದ ಸದಸ್ಯರು, ಗ್ರಾಪಂ ಆಡಳಿತ ಮಂಡಳಿ ಪ್ರಯತ್ನಕ್ಕೆ ಸ್ಪಂದನೆಯಾಗಿ ಪತ್ರಗಳು ಬರುತ್ತಿವೆ. ಯೋಗೇಶ್ ಗ್ರಂಥಪಾಲಕ, ಉಮ್ಮಡಹಳ್ಳಿ ಗ್ರಾಪಂ ಅರಿವು ಕೇಂದ್ರ