ಜಿಲ್ಲೆ

ಅಧಿವೇಶನ ಕಣ್ತುಂಬಿಕೊಂಡ ವಿದ್ಯಾರ್ಥಿಗಳು

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 70 ವಿದ್ಯಾರ್ಥಿಗಳು ಮಂಗಳವಾರ ವಿಧಾನಸಭೆ ಆಧಿವೇಶನ ವೀಕ್ಷಣೆ ಮಾಡಿ ಹರ್ಷ ವ್ಯಕ್ತಪಡಿಸಿದರು.
ಅಧಿವೇಶನ ವೀಕ್ಷಣೆ ಮಾಡಲು ಶಾಸಕ ಶರತ್ ಬಚ್ಚೇಗೌಡ ಅವರಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸ್ಪಂದಿಸಿದ ಶಾಸಕರು, ಸಭಾ ನಾಯಕರ ಅನುಮತಿ ಪಡೆದು 70 ವಿದ್ಯಾರ್ಥಿಗಳು ಹಾಗೂ ಐವರು ಉಪನ್ಯಾಸಕರಿಗೆ ಅಧಿವೇಶನ ವೀಕ್ಷಣೆಗೆ ಅನುವು ಮಾಡಿಕೊಟ್ಟಿದ್ದರು.
ಅಧಿವೇಶನದ ಬಳಿಕ ವಿಧಾನಸೌಧದ ಆವರಣದಲ್ಲಿನ ಗಾಂಧಿಪುತ್ಥಳಿಯ ಎದುರು ವಿದ್ಯಾರ್ಥಿಗಳೊಂದಿಗೆ ಭಾವಚಿತ್ರ ತೆಗೆಸಿಕೊಂಡ ಶಾಸಕ ಶರತ್‌ಬಚ್ಚೇಗೌಡ, ದೇಶದ ಆಧಾರ ಸ್ತಂಭಗಳಾಗಿ ಸೇವಾ ಮನೋಭಾವ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾವಂತ ಶಾಸಕರಿಂದ ಮಾತ್ರ ಇಂತಹ ಅವಕಾಶ ಪಡೆಯಲು ಸಾಧ್ಯ. ಶಿಕ್ಷಣ ಪ್ರೇಮಿಗಳಾದ ಶಾಸಕರು, ವಿದ್ಯಾರ್ಥಿಗಳು, ಶಾಲಾ-ಕಾಲೇಜುಗಳ ಬಗ್ಗೆ ಕಾಳಜಿಯಿಂದಲೇ ನಮಗೆ ಅಧಿವೇಶನ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು ಎಂದು ಉಪನ್ಯಾಸಕ ಚನ್ನಕೃಷ್ಣಪ್ಪ ತಿಳಿಸಿದರು.
ಗ್ರಾಮೀಣ ವಿದ್ಯಾರ್ಥಿಗಳು ವಿಧಾನಸೌಧಕ್ಕೆ ತೆರಳವುದು ಕಷ್ಟ ಸಾಧ್ಯ. ಈ ಆಸೆಯನ್ನು ಈಡೇರಿಸಿದ ಕಾಲೇಜು ಆಡಳಿತ ಮಂಡಳಿ ಹಾಗೂ ಶಾಸಕರ ಕಾರ್ಯಕ್ಕೆ ಎಲ್ಲರೂ ಅಭಾರಿಯಾಗಿದ್ದೇವೆ ಎಂದು ವಿದ್ಯಾರ್ಥಿನಿ ಹೇಮಾ ತಿಳಿಸಿದರು.