ಜಿಲ್ಲೆ

ರದ್ದಾದ ಬಸ್ ಬಿಡಲು ವಿದ್ಯಾರ್ಥಿಗಳ ಮನವಿ

ಗೋಕರ್ಣ: ಹತ್ತಿರದ ಹನೇಹಳ್ಳಿ, ಬಂಕೊಕೊಡ್ಲ, ಗಂಗಾವಳಿ ಮುಂತಾದ ಗ್ರಾಮಗಳಿಂದ ನಿತ್ಯ ಕುಮಟಾ ಮತ್ತು ಇತರೆಡೆಗೆ ಕಾಲೇಜಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಹನೇಹಳ್ಳಿ ಗ್ರಾಪಂ ಉಪಾಧ್ಯಕ್ಷ ಭರತ ಗಾಂವಕರ ಅವರಿಗೆ ಮನವಿ ನೀಡಿ ಗೋಕರ್ಣದಿಂದ ಬಂಕಿಕೊಡ್ಲ-ಹಿತ್ತಲಮಕ್ಕಿ ಮಾರ್ಗವಾಗಿ ಈ ಹಿಂದೆ ಓಡಾಡುತ್ತಿದ್ದ ರಾಜ್ಯ ಸಾರಿಗೆ ಬಸ್‌ನ್ನು ಪುನರಾರಂಭಿಸಲು ಅಗತ್ಯ ಕ್ರಮ ಜರುಗಿಸುವಂತೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ಹಿಂದೆ ಬಂಕಿಕೊಡ್ಲದಲ್ಲಿ ಹೊಸದಾಗಿ ಕಾಂಕ್ರೀಟ್ ರಸ್ತೆ ಮಾಡುವ ಸಲುವಾಗಿ ಗೋಕರ್ಣದಿಂದ ಬೆಳಗ್ಗೆ ಸಮಯದಲ್ಲಿ ಮತ್ತು ಕುಮಟಾದಿಂದ ಮಧ್ಯಾಹ್ನ ಈ ಮಾರ್ಗವಾಗಿ ಸಂಚರಿಸುವ ಬಸ್ ಅನ್ನು ರದ್ದು ಮಾಡಲಾಗಿತ್ತು. ಈಗಾಗಲೇ ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿರುವ ಜತೆಗೆ ಕಾಲೇಜ್ ಕೂಡ ಪ್ರಾರಂಭವಾಗಿರುವ ಕಾರಣ ತಕ್ಷಣ ಬಸ್ ಪ್ರಾರಂಭಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಈ ಭಾಗದಿಂದ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧೆಡೆಯ ಕಾಲೇಜಿಗೆ ನಿತ್ಯ ಹೋಗುತ್ತಿದ್ದಾರೆ. ಕಾರಣ ಒಂದು ಬಸ್ ಸಾಲದಾಗಿದ್ದು ಹೆಚ್ಚುವರಿಯಾಗಿ ಗೋಕರ್ಣ ಮತ್ತು ಕುಮಟಾದಿಂದ ಇನ್ನೊಂದು ಬಸ್‌ಗಾಗಿ ಸಹ ಮನವಿಯಲ್ಲಿ ಒತ್ತಾಯಿಸಲಾಗಿದೆ. ಇದರ ಸಂಗಡ ಹಿರೇಗುತ್ತಿ ಸರ್ಕಾರಿ ಕಾಲೇಜ್ ವತಿಯಿಂದ ಈಗಾಗಲೇ ಶಾಸಕ ದಿನಕರ ಶೆಟ್ಟಿ ಅವರಿಗೆ ಲಿಖಿತ ಮನವಿ ಸಲ್ಲಿಸಿ ಕಾಲೇಜಿಗೆ ನಿತ್ಯ ಬರುವ ಈ ಭಾಗದ 94 ವಿದ್ಯಾರ್ಥಿಗಳಿದ್ದು ಕಾರಣ ತಕ್ಷಣ ರದ್ದಾಗಿರುವ ಗಾಡಿಯನ್ನು ಪುನರಾರಂಭಿಸಲು ಹಾಗೂ ಅವರಿಗೆ ಒಂದು ಬಸ್ ಸಾಲದಿರುವ ಕಾರಣ ಹೆಚ್ಚುವರಿ ಬಸ್‌ಗಾಗಿ ವಿನಂತಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಪಂ ಉಪಾಧ್ಯಕ್ಷ ಭರತ ಗಾಂವಕರ ವಿದ್ಯಾರ್ಥಿಗಳ ತೊಂದರೆ ಬಗ್ಗೆ ಈಗಾಗಲೇ ಶಾಸಕರಿಗೆ ವಿಷಯ ತಿಳಿಸಲಾಗಿದೆ. ಸಂಬಂಧಿಸಿದ ಡಿಪೋ ಮ್ಯಾನೇಜರ್ ಸಂಗಡ ಚರ್ಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.