ಜಿಲ್ಲೆ

ವಿದ್ಯಾರ್ಥಿಗಳು ಬಾಹ್ಯಾಕಾಶದ ಜ್ಞಾನ ತಿಳಿದುಕೊಳ್ಳಲಿ

ಗಿರೀಶ ಸಗರ

ಬಾದಾಮಿ: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಿಂದ ನಡೆದಿರುವ ಸಂಶೋಧನೆಗಳಿಂದ ಭಾರತವು ವಿಶ್ವದ ಪ್ರಗತಿಪರ ರಾಷ್ಟ್ರಗಳ ಸಾಲಿನಲ್ಲಿದೆ ಎಂದು ಹಾಸನದ ಇಸ್ರೋ ಹಿರಿಯ ವಿಜ್ಞಾನಿ ಸಂಜೀವ ಚಂದ್ರಶೇಖರ ಗೌರ ಹೇಳಿದರು.

ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಎಸ್.ಬಿ.ಎಂ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಆರ್ಯಭಟನಿಂದ ಆದಿತ್ಯನ ಎಲ್-1ವರೆಗಿನ ಪಯಣದ ಯಶೋಗಾಥೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಬಾಹ್ಯಾಕಾಶದಲ್ಲಿ ನಡೆಯುವ ಸಂಶೋಧನೆಗಳ ಸಂಗತಿಗಳ ಕುರಿತು ಪ್ರಾಥಮಿಕ ಜ್ಞಾನವನ್ನಾದರೂ ವಿದ್ಯಾರ್ಥಿಗಳು ತಿಳಿದಿರಬೇಕು. ಹಾಗೂ ಆ ನಿಟ್ಟಿನಲ್ಲಿ ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆ ನಿರ್ದೇಶಕ ಜಿ.ಎಸ್. ಮಮದಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಜ್ಞಾನಿಕವಾಗಿ ದಾಪುಗಾಲು ಇಡುತ್ತಿರುವ ಜಗತ್ತಿನಲ್ಲಿ ವಿಜ್ಞಾನದ ಬೆಳವಣಿಗೆಗಳ ಮಾಹಿತಿ ವಿದ್ಯಾರ್ಥಿಗಳು ತಿಳಿದಿರಬೇಕೆಂದು ತಿಳಿಸಿದರು.

ಪ್ರಾಚಾರ್ಯ ರವೀಂದ್ರ ಮೂಲಿಮನಿ ಸ್ವಾಗತಿಸಿದರು. ಪ್ರಾಚಾರ್ಯ ಪ್ರಭು ಜವಳಿ, ಗ್ಲೋಬಲ್ ಕಂಪ್ಯೂಟರ್ ಮಾಲೀಕ ಶಕೀಲ್ ಪಿಂಜಾರ, ಶ್ರೀಪಾದ ಮಾಳಗಿ ಹಾಜರಿದ್ದರು.