ಹಾನಗಲ್ಲ: ಆಂಗ್ಲ ಭಾಷಾ ಶಿಕ್ಷಕಿಯ ನಿಯೋಜನೆ ರದ್ದುಗೊಳಿಸುವಂತೆ ಮಾಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸದ ಕಾರಣ ತಾಲೂಕಿನ ಬೈಚವಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ 200ಕ್ಕೂ ಅಧಿಕ ವಿದ್ಯಾರ್ಥಿಗಳು, ಆಂಗ್ಲ ಭಾಷಾ ಶಿಕ್ಷಕಿ ಸುಮಾ ಅವರನ್ನು ನಮ್ಮ ಶಾಲೆಯಿಂದ ಶಿರಸಿ ತಾಲೂಕಿನ ಇಸಳೂರು ಪ್ರೌಢಶಾಲೆಗೆ ನಿಯೋಜನೆ ಮಾಡಲಾಗಿದೆ. ಶಾಲೆಯಲ್ಲಿ 8 ರಿಂದ 10ನೇ ತರಗತಿವರೆಗೆ 291 ವಿದ್ಯಾಥಿರ್ಗಳು 8 ಗ್ರಾಮಗಳಿಂದ ಬಂದು ಅಭ್ಯಾಸ ಮಾಡುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭದಿಂದಲೇ ಆಂಗ್ಲ ಭಾಷಾ ತರಗತಿಗೆ ಸಮಸ್ಯೆಯಾಗಿದೆ. ಅವರ ನಿಯೋಜನೆ ರದ್ದುಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ ಅವರ ನಿಯೋಜನೆ ರದ್ದುಪಡಿಸಿ ನಮ್ಮ ಶಾಲೆಗೆ ಹಾಜರಾಗುವವರೆಗೆ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.
ಜು. 15ರೊಳಗೆ ಆಂಗ್ಲಭಾಷಾ ಶಿಕ್ಷಕಿಯ ನಿಯೋಜನೆ ರದ್ದುಗೊಳಿಸಿ ನಮ್ಮ ಶಾಲೆಗೆ ಹಾಜರಾಗಲು ಆಗ್ರಹಿಸಿ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ- ಹಾಗೂ ಮೇಲುಸ್ತುವಾರಿ ಸಮಿತಿ ಮತ್ತು 8 ಗ್ರಾಮಗಳ ಮಕ್ಕಳ ಪಾಲಕರು, ಶಿಕ್ಷಣ ಇಲಾಖೆ ಆಯುಕ್ತರು, ಧಾರವಾಡದ ಅಪರ ಆಯುಕ್ತರು, ಹಾವೇರಿ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಲ್ಲದೇ, ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ದರು. ಇಷ್ಟಾದರೂ ಕ್ರಮ ಕೈಗೊಳ್ಳದ ಕಾರಣ ಬಿಇಒ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ವಿದ್ಯಾಥಿರ್ಗಳು ಮೇಲುಸ್ತುವಾರಿ ಸಮಿತಿ ಸದಸ್ಯರು ಹಾಗೂ ಪಾಲಕರ ಮನವಿಗೆ ಪ್ರತಿಕ್ರಿಯಿಸಿದ ಬಿಇಒ ವಿ.ವಿ. ಸಾಲಿಮಠ, ತಾಲೂಕಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಿಗೆ 54 ಸಹಶಿಕ್ಷಕರ ಕೊರತೆ ಇದೆ. 51 ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. 16 ಹಿಂದಿ ಶಿಕ್ಷಕರ ಕೊರತೆ ನೀಗಿಸಲಾಗಿದೆ. ವಿದ್ಯಾಥಿರ್ಗಳ ಶೈಕ್ಷಣಿಕ ಅನುಕೂಲಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ಧರಣಿ ನಿಲ್ಲಿಸಿ ಶಾಲೆಗೆ ಹೋಗುವಂತೆ ಮನವಿ ಮಾಡಿದರು.
ಡಿಡಿಪಿಐ ಭೇಟಿ: ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಸ್ಯೆಗಳ ಕುರಿತು ಶಿಕ್ಷಣ ಇಲಾಖೆ ಉಪನಿರ್ದೇಶಕರ ಗಮನಕ್ಕೆ ತರಲಾಗಿದೆ. ಆ. 2ರಂದು ಡಿಡಿಪಿಐ ಹಾನಗಲ್ಲ ತಾಲೂಕಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವರೆಂಬ ವಿಶ್ವಾಸವಿದೆ. ಬೈಚವಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಸಮಸ್ಯಾತ್ಮಕ ಪ್ರಾಥಮಿಕ ಪ್ರೌಢಶಾಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಸಾಲಿಮಠ ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಶಂಕ್ರಪ್ಪ ತಾವರಗೇರಿ, ಉಪಾಧ್ಯಕ್ಷ ತಿಮ್ಮಣ್ಣ ಅಲಿಲವಾಡ, ಪಾಲಕರಾದ ಮಲ್ಲನಗೌಡ ಪಾಟೀಲ, ಭರಮಗೌಡ ಪಾಟೀಲ, ಚನಬಸಯ್ಯ ಹಿರೇಮಠ, ಮಹಮ್ಮದಜಾಫರ ಹಸನಾಬಾದಿ, ಅಜ್ಜನಗೌಡ ಪಾಟೀಲ, ಶಂಕ್ರಪ್ಪ ವಾಲೀಕಾರ, ರುದ್ರಗೌಡ ಪಾಟೀಲ, ಮೋದಿನಸಾಬ ನಾಗರೊಳ್ಳಿ, ನಾಗೇಂದ್ರ ಯಮನಕ್ಕನವರ, ಮಾರ್ಥಂಡಪ್ಪ ಆಲದಕಟ್ಟಿ, ದೇವೇಂದ್ರಪ್ಪ ಅಡಕಿಹಾಳ ಸೇರಿದಂತೆ ಪಾಲಕರು, ನಾಗರಿಕರು ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು.