ಜಿಲ್ಲೆ

ವಿದ್ಯಾರ್ಥಿಗಳು ದುಷ್ಚಟಗಳಿಂದ ದೂರವಿರಿ

ರೇಷ್ಮೆ ನಗರ ಡೆಸ್ಕ್

ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ಸಲಹೆ

 ಚನ್ನಪಟ್ಟಣ : ಮಾದಕ ವ್ಯಸನಗಳು ಸುಂದರವಾದ ಜೀವವನ್ನು ಬಲಿಪಡೆಯುತ್ತವೆ. ಯುವ ಸಮುದಾಯ ದುಷ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಬದುಕು ಕಟ್ಟಿಕೊಳ್ಳಬೇಕು ಎಂದು ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ತಿಳಿಸಿದರು.

ತಾಲೂಕಿನ ಬೆಳಕೆರೆ ಸಮೀಪವಿರುವ ಸಂಪೂರ್ಣ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ಮಂಗಳವಾರ ಬೆಂಗಳೂರಿನ ಮದ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಜೀವನದಲ್ಲಿ ಉನ್ನತವಾದದನ್ನು ಸಾಧಿಸುವ ಹಾದಿಯಲ್ಲಿರುವ ನಮ್ಮ ಯುವಜನಾಂಗ ಇಂತಹ ವ್ಯಸನಗಳಿಂದ ಮುಕ್ತರಾಗಿರಬೇಕು. ವಿದ್ಯೆಯ ಜತೆಗೆ ತಮ್ಮ ಸಾಧನೆಯತ್ತ ಮಾತ್ರ ಗಮನ ಹರಿಸಬೇಕು. ಮಾದಕ ವಸ್ತುಗಳನ್ನು ಕುತೂಹಲಕ್ಕಾಗಿ ಅಥವಾ ಮೋಜಿಗಾಗಿ ಬಳಸಲು ಪ್ರಾರಂಭಿಸಿದರೆ ಅದು ವ್ಯಸನವಾಗಿ ಮಾರ್ಪಾಡು ನಿಮ್ಮ ಬದುಕನ್ನು ಹಾಳು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

ದೇಶದಲ್ಲಿ ಶೇ.30 ಪುರುಷರು ಹಾಗೂ ಶೇ.5 ಮಹಿಳೆಯರು ಮದ್ಯಪಾನ ವ್ಯಸನಕ್ಕೆ ಅಂಟಿಕೊಂಡಿದ್ದಾರೆ. 2005ರ ಅಂಕಿ ಅಂಶದ ಪ್ರಕಾರ ಶೇ.42 ಪುರುಷರು ಹಾಗೂ ಶೇ.14.2 ಮಹಿಳೆಯರು ತಂಬಾಕು ವ್ಯಸನಿಗಳಿದ್ದಾರೆ. ಶೇ.28.6 ಯುವ ಜನತೆ ತಂಬಾಕನ್ನು ಬಳಸುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ 2.35 ಮಿಲಿಯನ್ ಜನ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ. ಜೀವಕ್ಕೆ ಸಂಚಕಾರ ಎಂಬುದು ತಿಳಿದು ಅಂತಹ ವಸ್ತುಗಳನ್ನು ಸೇವನೆ ಮಾಡುವುದು ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಂತೆ ಎಂದು ಎಚ್ಚರಿಸಿದರು.

ಆರೋಗ್ಯವು ಒಮ್ಮೆ ಹಾಳಾದರೆ ಅದನ್ನು ಸರಿ ಮಾಡುವುದು ಕಷ್ಟಕರ. ಈ ಹಿನ್ನೆಲೆಯಲ್ಲಿ ಯಾವುದೇ ತರಹದ ವ್ಯಸನಿಗಳಾಗದೆ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಿ. ವ್ಯಸನದಿಂದ ಹೊರಬರಲು ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಹಾಗೂ ಸಹಾಯವಾಣಿ ಸಂಖ್ಯೆ 14416 ಕ್ಕೆ ಸಂಪರ್ಕಿಸಿ ಎಂದು ಮಾಹಿತಿ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಜಿ. ರವಿರಾಜ್, ಮುದುಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸಾದ್ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು. ಸಂಪೂರ್ಣ ಕಾಲೇಜಿನ ಪ್ರಾಂಶುಪಾಲ ಭರತೇಶ್, ಡೀನ್ ವಾಸುದೇವನ್ ಸೇರಿ ಪ್ರಾಧ್ಯಾಪಕರು ಇದ್ದರು.