ಜಿಲ್ಲೆ

ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದಿರಲಿ

ಹುಣಸೂರು: ತಂಬಾಕು ಉತ್ಪನ್ನಗಳ ಬಳಕೆ ಕುರಿತು ಯುವಸಮೂಹ ಹೆಚ್ಚು ಆಕರ್ಷಿತವಾಗುತ್ತಿರುವುದು ದುರಂತದ ಸಂಗತಿ ಎಂದು 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಗೋವಿಂದಯ್ಯ ಬೇಸರ ವ್ಯಕ್ತಪಡಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಸಹಯೋಗದಲ್ಲಿ ಶನಿವಾರ ತರಬೇತಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕುರಹಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಂಬಾಕು ಸೇವನೆ ಕುರಿತಂತೆ ವಿದ್ಯಾರ್ಥಿಗಳು ಮತ್ತು ಯುವಕರು ಕುತೂಹಲದಿಂದ ಸೇವಿಸಲು ಆರಂಭಿಸುತ್ತಾರೆ. ಆರಂಭಿಸುವಾಗ ಇರುವ ಸಂತೋಷ ಕೆಲದಿನಗಳಲ್ಲೇ ಜಾಡ್ಯವಾಗಿ ಪರಿವರ್ತಿತವಾಗಿರುತ್ತದೆ. ಇದನ್ನು ಅರಿತುಕೊಳ್ಳುವ ಕಾಲಕ್ಕೆ ಎಲ್ಲವೂ ಮೀರಿಹೋಗಿರುತ್ತದೆ. ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ತಂಬಾಕು ಕೃಷಿ ಪ್ರಧಾನ ಕೃಷಿಯಾಗಿರುವುದು ನಿಜ. ಹಾಗೆಂದ ಮಾತ್ರಕ್ಕೆ ಅದನ್ನು ಬಳಸಲೇಬೇಕೆಂಬುದಿಲ್ಲ. ವಾಣಿಜ್ಯ ಬೆಳೆಯಾಗಿ ರೈತರು ತಮ್ಮ ಬದುಕನ್ನು ಅಲ್ಲಿ ಕಂಡುಕೊಂಡಿದ್ದಾರೆ. ಆದರೆ ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಇಂತಹ ದುಶ್ಚಟಕ್ಕೆ ಸಿಲುಕಬಾರದು ಎಂದು ಸಲಹೆ ನೀಡಿದರು.

ಕಾನೂನು ಸೇವೆ ಲಭ್ಯ: ಸಮಾಜದಲ್ಲಿನ ಶೋಷಿತ, ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗಾಗಿ ನ್ಯಾಯಾಲಯದಲ್ಲಿ ಕಾನೂನು ಸೇವಾ ಸಮಿತಿಯ ಮೂಲಕ ಕಾನೂನಿನ ನೆರವನ್ನು ಉಚಿತವಾಗಿ ನೀಡಲಾಗುತ್ತಿದೆ. ಸಿವಿಲ್ ವ್ಯಾಜ್ಯ, ಅಪಘಾತ, ಕೌಟುಂಬಿಕ ಕಲಹ ಮುಂತಾದ ಪ್ರಕರಣಗಳನ್ನು ಬಡಜನರಿಗೆ ಉಚಿತವಾಗಿ ಸೇವೆ ನೀಡಿ ನ್ಯಾಯ ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿನ ಬಡಜನರು ಇಂತಹ ಸಮಸ್ಯೆಗಳಿಂದ ಕಂಗೆಟಿದ್ದರೆ ಅವರಿಗೆ ತಿಳಿಹೇಳಿ ಸಮಿತಿಯನ್ನು ಸಂಪರ್ಕಿಸಲು ಸಹಕರಿಸಿರೆಂದು ಸೂಚಿಸಿದರು.

ಸಂಚಾರಿ ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ ಮಾತನಾಡಿ, ಸಿನಿಮಾದ ಹೀರೋಗಳು ಸಿಗರೇಟ್ ಸೇದುವ ಸ್ಟೈಲ್‌ಗೆ ಮರುಳಾಗಿ ನಿಮ್ಮ ಬಾಳಿನಲ್ಲೂ ಹೀರೋಯಿಸಂ ಕನಸು ಕಾಣುವುದನ್ನು ಬಿಡಿ. ತಂಬಾಕು ಸೇವನೆಯಲ್ಲಿ ಧೂಮಪಾನ ಮತ್ತು ಗುಟ್ಖಾ ಸೇವನೆ ಎರಡರಿಂದಲೂ ಕ್ಯಾನ್ಸರ್ ಕಾಯಿಲೆಗೆ ಮೂಲವಾಗಿದೆ. ಕ್ಯಾನ್ಸರ್ ದೇವರು ಕೊಟ್ಟ ಕಾಯಿಲೆಯಲ್ಲ. ಬದಲಾಗಿ ನಮ್ಮ ಜೇಬಿನ ಹಣದಿಂದ ತಂಬಾಕು ಖರೀದಿಸಿ ತರಿಸಿಕೊಂಡ ಹೆಮ್ಮಾರಿ ಎನ್ನುವುದನ್ನು ಅರಿಯಿರಿ ಎಂದು ಕಿವಿಮಾತು ಹೇಳಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಮೃತಾ ಎಸ್.ಹೊಸಮಠ ಮಾತನಾಡಿದರು. ಅಧ್ಯಕ್ಷತೆಯನ್ನು ಐಟಿಐ ಸಂಸ್ಥೆಯ ಪ್ರಾಂಶುಪಾಲ ಟಿ.ಪಿ.ನವೀನ್ ವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪುಟ್ಟಸ್ವಾಮಿ ಇದ್ದರು.