ಜಿಲ್ಲೆ

ವಿದ್ಯಾರ್ಥಿಗಳು ಒಂದು ವಿಷಯಕ್ಕೆ ಸೀಮಿತ ಆಗಬಾರದು : ಕೇರಳ ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ.ಕೆ. ಶಿವಕುಮಾರ್

ಮೈಸೂರು: ವಿದ್ಯಾರ್ಥಿಗಳು ಒಂದು ವಿಷಯಕ್ಕೆ ಮಾತ್ರ ಸೀಮಿತರಾಗದೆ ಎಲ್ಲ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಕೆ. ಶಿವಕುಮಾರ್ ಹೇಳಿದರು.

ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಗಣಿತ, ಭೌತ ಮತ್ತು ರಾಸಾಯನ ವಿಜ್ಞಾನಗಳಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಮತ್ತು ಸವಾಲುಗಳು ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಭೌತಶಾಸ್ತ್ರ, ಇತಿಹಾಸ, ಜೀವಶಾಸ್ತ್ರ, ಗಣಿತ ಸೇರಿದಂತೆ ವಿವಿಧ ವಿಷಯಗಳಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತಿದೆ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳು ಹೊಂದುವುದು ಉತ್ತಮ ಎಂದು ಸಲಹೆ ನೀಡಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗೆಗಳು ನಡೆಯುತ್ತಿದೆ. ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಇದರ ಜತೆಗೆ ಬಳಕೆಯ ಮಿತಿಯ ಅರಿವು ಸಹ ಇರಬೇಕು. ಇಲ್ಲವಾದಲ್ಲಿ ತಂತ್ರಜ್ಞಾನದಿಂದಲೇ ನಮಗೆ ಸಮಸ್ಯೆ ಎದುರಾಗುತ್ತದೆ ಎಂದು ಎಚ್ಚರಿಸಿದರು.

ರಸಾಯನಶಾಸ್ತ್ರದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಹಸಿರು ರಸಾನಶಾಸ್ತ್ರ (ಗ್ರೀನ್ ಕೆಮಿಸ್ಟ್ರಿ)ದಲ್ಲಿ ಪರಿಸರಕ್ಕೆ ಪೂರಕವಾದ ಬಯೋಡಿಗ್ರೇಬಲ್ ಪ್ಲಾಸ್ಟಿಕ್‌ಅನ್ನು ಆವಿಷ್ಕಾರ ಮಾಡಲಾಗುತ್ತಿದ್ದು, ಈ ವಿಷಯದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ. ಜನರ ಕೈಗೆಟುಕುವ ದರಲ್ಲಿ ಬಯೋಡಿಗ್ರೇಬಲ್ ಪ್ಲಾಸ್ಟಿಕ್‌ಅನ್ನು ಅಭಿವೃದ್ಧಿ ಪಡಿಸುವ ಸಂಶೋಧನೆಗಳು ನಡೆಯುತ್ತಿದೆ. ಇದು ಯಶಸ್ವಿಯಾದರೆ ಪರಿಸರಕ್ಕೆ ದೊಡ್ಡ ಕೊಡುಗೆ ನೀಡಿದಂತೆ ಆಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ, ಐಕ್ಯೂಎಸಿ ಸಂಯೋಜಕಿ ಕೆ.ಎಸ್. ಸುಕೃತಾ, ಪ್ರಾಧ್ಯಾಪಕರಾದ ಎನ್. ಚೈತ್ರಾ, ವಿ.ಪವಿತ್ರಾ ಇದ್ದರು.