ಜಿಲ್ಲೆ

ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಿ

ಆದರ್ಶ್. ಎಂ.ಕೆ.

ಮಡಿಕೇರಿ: ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಪರಿಶ್ರಮ, ಸತತ ಪ್ರಯತ್ನ, ನಿರಂತರ ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಹೇಳಿದರು.

ಹಳೆಕೂಡಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಡೆದ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಹರಪಳ್ಳಿ ರವೀಂದ್ರ ಅವರು ಪ್ರತಿ ವರ್ಷದಂತೆ ನೋಟ್ ಪುಸ್ತಕ ವಿತರಣೆಮಾಡಿ ಮಾತನಾಡಿದರು.

ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ತಾವು ಪ್ರತಿ ವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡುತ್ತಾ ಬರಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರ ತಂಡವಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಉತ್ತಮ ಕಲಿಕೆಯೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಂಡು ಪೋಷಕರು ಮತ್ತು ಸಮಾಜದ ಋಣವನ್ನು ತೀರಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕು ಎಂದರು.

ವಿದ್ಯಾರ್ಥಿಗಳು ರಾಷ್ಟ್ರ ನಾಯಕರ ಆದರ್ಶ ತತ್ವಾದರ್ಶನಗಳನ್ನು ಮೈಗೂಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು. ಮಕ್ಕಳು ಆತ್ಮವಿಶ್ವಾಸದಿಂದ ಶ್ರದ್ಧೆ ಹಾಗೂ ಛಲದಿಂದ ಅಭ್ಯಾಸ ಮಾಡಿದರೆ ಗುರಿ ತಲುಪಲು ಸಾಧ್ಯ ಎಂದು ಹರಪಳ್ಳಿ ರವೀಂದ್ರ ಸಲಹೆ ನೀಡಿದರು.

ಶಾಲಾ ಮುಖ್ಯ ಶಿಕ್ಷಕಿ ಸಣ್ಣಕ್ಕ ಮಾತನಾಡಿ, ತಮ್ಮನ್ನು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದಾನಿ ಹರಪಳ್ಳಿ ರವೀಂದ್ರ ಅವರು, ತಮ್ಮ ದುಡಿಮೆಯ ಒಂದಷ್ಟು ಪಾಲನ್ನು ಸಹಾಯ ಹಸ್ತದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯಗಳಿಗೆ ನಿರಂತರವಾಗಿ ಸಹಾಯಹಸ್ತ ನೀಡುತ್ತಿರುವುದು ಶ್ಲಾಘನೀಯವಾದುದು. ಹರಪಳ್ಳಿ ರವೀಂದ್ರ ಅವರು ಸತತ ೨೬ ವರ್ಷಗಳಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಿಕೊಂಡು ಬರುತ್ತಿದ್ದಾರೆ. ಅದೇ ರೀತಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿರುವುದು ಸಂತೋಷದ ವಿಷಯ ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮೇಘ ಪ್ರಸನ್ನ ಮಾತನಾಡಿ, ತಾವು ದುಡಿದು ಗಳಿಸಿದ್ದರಲ್ಲಿ ಸ್ವಲ್ಪಭಾಗವನ್ನು ದೀನರಿಗೆ ಮತ್ತು ಬಡ ಮಕ್ಕಳ ಬಾಳಿಗೆ ನೀಡುವುದರಿಂದ ಅವರ ಬದುಕು ದಾರಿದೀಪವಾಗುತ್ತದೆ. ಇಂತಹ ಸಾಮಾಜಿಕ ಕಾರ್ಯಕ್ಕೆ ಸಮಾಜ ಸೇವಕ ರವೀಂದ್ರ ಅವರು ಮೇಲ್ಪಂಕ್ತಿ ಹಾಕಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಕಿರಾದ ಕಮಲ, ವಿಜಯಲಕ್ಷ್ಮಿ, ದೀಪಿಕಾ, ಹಾಗೂ ಎಂ.ಎ.ಕಾಶಿಮ್ ಮಾದಾಪುರ, ಹರಪಳ್ಳಿ ರವೀಂದ್ರ ಅವರ ಪುತ್ರ ಅಚ್ಚಲ್ ರವೀಂದ್ರ ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.