ಜಿಲ್ಲೆ

ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಬೇಕು

ಆದರ್ಶ್. ಎಂ.ಕೆ.

ಮಡಿಕೇರಿ: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿ ಜಾಗೃತರಾಗಬೇಕು. ಗುರಿ ಮುಟ್ಟಲು ಸತತ ಶ್ರಮ ವಹಿಸಬೇಕು ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ರೋಟರಿಯನ್ ಸುರೇಶ್ ಚಂಗಪ್ಪ ಎಂದು ಕರೆ ನೀಡಿದರು.

ರೋಟರಿ ಮಡಿಕೇರಿ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ೧೦ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

೧೦ನೇ ತರಗತಿ ಹಾಗೂ ಪಿಯುಸಿ ಹಂತ ವಿದ್ಯಾರ್ಥಿಗಳಿಗೆ ಭವಿಷ್ಯದ ನಿರ್ಧಾರವನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ಕಾಲಘಟ್ಟವಾಗಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಗುರಿ ಸಾಧನೆಗಾಗಿ ಶ್ರಮ ವಹಿಸಿದರೆ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು.

ಉದ್ಯೋಗವನ್ನು ಪಡೆಯಲು ವೃತ್ತಿ ತರಬೇತಿ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸೂಕ್ತ ತರಬೇತಿಯನ್ನು ಪಡೆದುಕೊಂಡು ನಿರ್ದಿಷ್ಟ ಗುರಿಯನ್ನು ತಲುಪಬೇಕು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಬೇಕು ಎಂದು ಕರೆ ನೀಡಿದರು.

ಸರ್ಕಾರದ ಸೌಲಭ್ಯಗಳನ್ನು ಪಡೆಯದೆ ರೋಟರಿ ಕ್ಲಬ್ ದೇಶದ ಉದ್ದಗಲಕ್ಕೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಮತ್ತು ವಿದ್ಯಾರ್ಥಿಗಳ ಅಗತ್ಯತೆಯನ್ನು ಪೂರೈಸಿಕೊಂಡು ಬರುತ್ತಿದೆ. ರೋಟರಿ ಸದಸ್ಯರು ತ್ಯಾಗ ಮನೋಭಾವನೆ ಮೂಲಕ ಕಾರ್ಯಯೋಜನೆ ರೂಪಿಸಿ ಇತರರಿಗೆ ನೆರವು ನೀಡುವ ಉದ್ದೇಶದೊಂದಿಗೆ ಸೇವೆ ಸಲ್ಲಿಸುತ್ತಾರೆ ಎಂದು ಸುರೇಶ್ ಚಂಗಪ್ಪ ತಿಳಿಸಿದರು.

ರೋಟರಿ ಮಡಿಕೇರಿ ಅಧ್ಯಕ್ಷ ಸುದಯ್ ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ಆಕಾಂಕ್ಷಿ ಎಜುಕೇಷನ್ ಟ್ರಸ್ಟ್ ಸ್ಥಾಪಕ ಡಾ.ಶ್ರೀಶ ಭಟ್, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಕುಕ್ಕೇರ ಜಯ ಚಿಣ್ಣಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್, ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲೆ ಕೆ.ವಿ.ಶಶಿಕಲಾ, ರೋಟರಿ ಸದಸ್ಯರು, ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗ, ಕೊಡಗು ವಿದ್ಯಾಲಯ, ಸಂತ ಮೈಕಲರ ಶಾಲೆ ಮತ್ತು ಬ್ಲಾಸಂ ಶಾಲೆಯ ೧೦ನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಉಪನ್ಯಾಸ ಕಾರ್ಯಕ್ರಮ

ಸಭಾ ಕಾರ್ಯಕ್ರಮದ ನಂತರ ಉಪನ್ಯಾಸ ನೀಡಿದ ಪುತ್ತೂರು ಆಕಾಂಕ್ಷಿ ಎಜುಕೇಷನ್ ಟ್ರಸ್ಟ್ ಸ್ಥಾಪಕ ಡಾ.ಶ್ರೀಶ ಭಟ್ ವಿದ್ಯಾರ್ಥಿಗಳಲ್ಲಿ ಪಠ್ಯಪುಸ್ತಕದ ಹೊರತಾಗಿ, ಉದ್ಯೋಗಕ್ಕೆ ಸಂಬಂಧಪಟ್ಟ ವಿಶೇಷ ಕೌಶಲ್ಯಗಳನ್ನು ಬೆಳೆಸಬೇಕು. ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಕಠಿಣ ಶ್ರಮದ ಅಗತ್ಯವಿದೆ ಎಂದರು.

ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು ಉದ್ಯೋಗವನ್ನು ಪಡೆಯಲು ಸಹಕಾರಿಯಾಗಿದೆ ಎಂದ ಅವರು, ಕೌಶಲ್ಯಭಿವೃದ್ಧಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ವಾಯುಪಡೆಯಲ್ಲಿ ಸಿಗಬಹುದಾದ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿದರು.