ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ, ಆಚಾರ, ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಸ್ಎಸ್ ಕಾಲೇಜು ಆವರಣದಲ್ಲಿನ ಉತ್ಸವ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿ ಶರ್ವ ಭಟ್ ಅವರ "ದಿ ಅಡ್ವೆಂಚರಸ್ ಪಾಲ್ಸ್ ಆ್ಯಂಡ್ ದಿ ಕಾಲ್ ಆಫ್ ದಿ ಸ್ಟೋನ್ಸ್' ಕಥಾಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಶ್ರದ್ಧೆ ಹಾಗೂ ಶ್ರಮ ಹಾಕಿ ಗುರಿ ಮುಟ್ಟಬೇಕು ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು. ಅಪರೂಪದಲ್ಲಿ ಅಪರೂಪವಾಗಿರುವ ಶರ್ವನ ಪ್ರತಿಭೆ ಬೆರಗುಗೊಳಿಸುವಂತಿದೆ. ಚಿಕ್ಕ ವಯಸ್ಸಿನಲ್ಲೇ ಆತನ ಬರವಣಿಗೆ ಹಾಗೂ ಮಾತನಾಡುವ ಕೌಶಲ ಗಮನಿಸಿದರೆ, ಮುಂದಿನ ದಿನಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವುದು ನಿಶ್ಚಿತವಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ರವೀಂದ್ರ ಮುಸಳೆ ಪುಸ್ತಕ ಕುರಿತು ಮಾತನಾಡಿ, ಶರ್ವ ಬರೆದಿರು ಕಥಾ ಸಂಕಲನ ಓದುವಾಗ ರೋಮಾಂಚನ ಮತ್ತು ಆಶ್ಚರ್ಯವಾಗುತ್ತದೆ. ಕಥೆಗಳು ಅದ್ಭುತ ಸ್ಥಳಗಳಿಗೆ ಕೊಂಡೊಯ್ಯುತ್ತವೆ. ನಗುವಂತೆ ಮಾಡುತ್ತದೆ ಮತ್ತು ಹೊಸ ವಿಷಯಗಳನ್ನು ಕಲಿಸುತ್ತದೆ. ಆತನ ಬರವಣಿಗೆ, ಅವನಲ್ಲಿರುವ ಸುಪ್ತ ಕಲ್ಪನಾಶಕ್ತಿ, ಬಳಸಿರುವ ಪದಗಳು ಅದ್ಭುತ. ಈತನ ಪ್ರತಿಭೆ ರಾಷ್ಟ್ರ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಜೆಎಸ್ಎಸ್ ಶಾಲೆ ಪ್ರಾಚಾರ್ಯೆ ಸಾಧನಾ ಎಸ್, ಉಪಪ್ರಾಚಾರ್ಯೆ ಸುಕನ್ಯಾ, ಶರ್ವ ಭಟ್, ಮಹಾವೀರ ಉಪಾಧ್ಯೆ, ಸಾವಿತ್ರಿ ಭಟ್, ಕಿರಣ ಭಟ್, ರಶ್ಮಿ ಭಟ್, ಎನ್.ವಿ. ಹೆಗಡೆ, ವಿ.ಎಸ್. ಹೆಗಡೆ, ಎನ್.ಎಸ್. ಭಟ್, ಎನ್.ಎಸ್. ಗೋವಿಂದರೆಡ್ಡಿ, ಎನ್.ಎನ್. ಸವಣೂರ, ಮಹೇಶ ಕುರಬರ, ಎಸ್.ಎಂ. ಬೋಂಗಾಳೆ, ಶಿಕ್ಷಕರು, ಇತರರು ಇದ್ದರು.
ಜಿ.ಆರ್.ಭಟ್ ಸ್ವಾಗತಿಸಿದರು. ಸಂಗಮೇಶ ಹಡಪದ ವಂದಿಸಿದರು.