ಜಿಲ್ಲೆ

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಬೇಕು: ದೇವದಾಸ್

ಮಡಿಕೇರಿ: ಶಿಕ್ಷಣವಂತರಾಗುವುದರೊಂದಿಗೆ ಸಂಸ್ಕಾರವಂತರಾಗಿ ಉತ್ತಮ ಬದುಕನ್ನು ರೂಪಿಸಿಕೊಂಡ ಬಳಿಕ ಸಮಾಜಕ್ಕೆ ತಮ್ಮಿಂದ ಸಾಧ್ಯವಾದ ಕೊಡುಗೆಯನ್ನು ನೀಡಲು ವಿದ್ಯಾರ್ಥಿಗಳು ಮುಂದಾಗಬೇಕೆಂದು ನಗರದ ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಎಚ್.ವಿ.ದೇವದಾಸ್ ಕರೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಮಿತಿಯಿಂದ ನಗರದ ಮೈತ್ರಿ ಭವನದಲ್ಲಿ ಇತ್ತೀಚೆಗೆ ಆಯೋಜಿತ ೩೫ನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟನೆಯ ಮೂಲಕ ಸನ್ಮಾನ ಪಡೆದ ಹಲವಾರು ಮಂದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದನ್ನು ಸ್ಮರಿಸಿದ ಅವರು, ಇಂತಹ ಒಂದು ಸನ್ಮಾನ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಪ್ರೇರಣೆಯನ್ನು ನೀಡುವಂತದ್ದಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಬಳಿಕ ಉತ್ತಮ ಹುದ್ದೆಗಳನ್ನು ಪಡೆದುಕೊಳ್ಳುವ ಸಂದರ್ಭ ತಮ್ಮ ಗಳಿಕೆಯ ಒಂದಂಶವನ್ನು ಶಿಕ್ಷಣ ಪಡೆಯಲು ನೆರವನ್ನು ಬಯಸುವವರಿಗೆ ನೀಡುವಂತಾಗಬೇಕೆಂದು ತಿಳಿಸಿದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಮಡಿಕೇರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಎಚ್.ಪಿ.ನಿರ್ಮಲ ಅವರು ಮಾತನಾಡಿ, ಯುವ ಸಮೂಹವು ಮನಸು ಮಾಡಿದಲ್ಲಿ ರಾಷ್ಟ್ರದ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಯುವ ಸಮೂಹ ಸಾಧನೆಗಳನ್ನು ಮಾಡುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಂತಹ ಸಾಧನೆಗೆ ಜಾತಿ ಇಲ್ಲವೆ ಬಡತನ ಎಂದಿಗೂ ಅಡ್ಡಿಯಾಗಬಾರದು. ಇಂತಹ ಯಾವುದೇ ಅಡೆತಡೆಗಳನ್ನು ಮೆಟ್ಟಿ ನಿಂತಾಗಲೆ ಸಾಧನೆಯ ಶಿಖರವೇರಲು ಸಾಧ್ಯವೆಂದು ದೃಢವಾಗಿ ನುಡಿದರು.

ರಾಜ್ಯ ವನ್ಯಜೀವಿ ಮಂಡಳಿದ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ, ಇಡೀ ವಿಶ್ವದಲ್ಲಿ ಭಾರತ ಗೌರವದ ಸ್ಥಾನವನ್ನಿಂದು ಪಡೆದುಕೊಂಡಿದೆಯಾದರೆ ಅದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೆ ಕಾರಣ. ಇಂತಹ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಅನುಷ್ಟಾನಗೊಂಡಾಗ ಮಾತ್ರ ದೇಶ ಪ್ರಗತಿಯ ಪಥದಲ್ಲಿ ಮುಂದುವರೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಅರಿತು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಜಿಲ್ಲಾ ದಸಂಸ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ, ಸಂಘಟನೆಯ ಮೂಲಕ ಇಂತಹ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸುವ ಮೂಲಕ ಶೋಷಿತ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೇರಣೆ ನೀಡುವುದೇ ಆಗಿದೆ. ಸನ್ಮಾನ ಸ್ವೀಕರಿಸಿದ ಮಕ್ಕಳು ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆನ್ನುವುದು ಸಂಘಟನೆಯ ಉದ್ದೇಶವೆಂದು ತಿಳಿಸಿದರು.

ಪ್ರತಿಭಾವಂತ ಮಕ್ಕಳಿಗೆ ಸನ್ಮಾನ: ಜಿಲ್ಲೆಯ ವಿವಿಧೆಡೆಗಳ ಪ್ರತಿಭಾವಂತ ಮಕ್ಕಳನ್ನು ಇದೇ ಸಂದರ್ಭ ಅತಿಥಿ ಗಣ್ಯರು ಸನ್ಮಾನಿಸಿ ಪ್ರೋತಾಹಿಸಿದರು. ಇದೇ ಸಂದರ್ಭ ಸಂಘಟನೆಯ ವತಿಯಿಂದ ಡಾ.ದೇವದಾಸ್‌ರನ್ನು ಸನ್ಮಾನಿಸಲಾಯಿತು.

ಮಡಿಕೇರಿ ನಗರಸಭಾ ಸದಸ್ಯರು ಹಾಗೂ ಮಹಾಬೋಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್, ದಸಂಸ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಮಡಿಕೇರಿ ತಾಲೂಕು ದಸಂಸ ಸಂಚಾಲಕ ದೀಪಕ್ ಪೊನ್ನಪ್ಪ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೇಕಲ್ಲು ಕುಶಾಲಪ್ಪ ಮಾತನಾಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಧಾ ವರದರಾಜ್, ಪೊನ್ನಂಪೇಟೆ ತಾಲೂಕು ದಸಂಸ ಸಂಚಾಲಕ ಹೆಚ್.ಆರ್.ಜಗದೀಶ್, ದಸಂಸ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಸಂತೋಷ್ ಕುಮಾರ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ.ಜೆ.ಈರಪ್ಪ ಉಪಸ್ಥಿತರಿದ್ದರು. ಸಂಘಟನೆಯ ಪ್ರಮುಖರಾದ ಅಜಿತ್ ಕಾರ್ಯಪ್ಪ ಆರಂಭದಲ್ಲಿ ಬುದ್ಧ ವಂದನೆ ನಡೆಸಿಕೊಟ್ಟು, ಸ್ವಾಗತಿಸಿದರು.