ರಾಯಚೂರು: ವಿದ್ಯಾರ್ಥಿಗಳು ಜ್ಞಾನವನ್ನು ಹಂಚಿಕೊಳ್ಳುವ ಕೆಲಸ ಮಾಡಬೇಕು. ಇದರಿಂದ ಜ್ಞಾನ ಬೆಳೆಯುವುದರ ಜತೆಗೆ ಅನುಭವಾತ್ಮಕವಾಗಿಯೂ ಜ್ಞಾನ ಹೆಚ್ಚಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹ್ಮದ ಮೊಸೀನ್ ಹೇಳಿದರು.
ಸ್ಥಳೀಯ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ 12ನೇ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಂಚಿಕೊಂಡಷ್ಟು ಬೆಳೆಯುವುದು ಜ್ಞಾನ ಮಾತ್ರವಾಗಿದೆ. ಜತೆಗೆ ಅದನ್ನು ಯಾರೂ ಕಸಿದುಕೊಳ್ಳದ ಸರಕಾಗಿದೆ ಎಂದರು.
ತಂದೆ, ತಾಯಿ ಮತ್ತು ಬೋಧಕ ಸಿಬ್ಬಂದಿಗಳ ಪರಿಶ್ರಮದಿಂದ ನೀವು ಪದವಿ ಪಡೆದುಕೊಂಡಿದ್ದೀರಿ. ವೈದ್ಯಕೀಯ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಅದರ ಘನತೆ, ಗೌರವವನ್ನು ಉಳಿಸುವ ಕೆಲಸವನ್ನು ಹೊಸದಾಗಿ ವೃತ್ತಿ ಆರಂಭಿಸುವ ವೈದ್ಯರು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಪ್ರಶಸ್ತಿ, ನಗದು ಬಹುಮಾನ ಮತ್ತು 130 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ಪಡೆದ ವಿದ್ಯಾರ್ಥಿಗಳು ಸಂಭ್ರಮ ಆಚರಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ ರಾಥೋಡ್, ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಎಚ್.ಬಸವನಗೌಡಪ್ಪ, ವೈದ್ಯಕೀಯ ಸಲಹೆಗಾರ ಡಾ.ಶರಣಬಸಪ್ಪ ಕಾರಬಾರಿ, ನಿವೃತ್ತ ಕರ್ನಲ್ ವೆಂಕಟೇಶ ನಾಯಕ, ರಿಮ್ಸ್ ನಿರ್ದೇಶಕ ಡಾ.ಬಿ.ಎಚ್.ರಮೇಶ, ಪ್ರಾಚಾರ್ಯ ಡಾ.ಬಸವರಾಜ ಪಾಟೀಲ್ ಉಪಸ್ಥಿತರಿದ್ದರು.