ಜಿಲ್ಲೆ

ಮಾದಕ ವಸ್ತುಗಳ ವಿರುದ್ಧ ವಿದ್ಯಾರ್ಥಿಗಳು ಜಾಗೃತರಾಗಬೇಕು

ಸುನಿಲ್ ಪೊನ್ನೇಟಿ

ಮಡಿಕೇರಿ:

ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕರು, ಪೋಷಕರು ಸೇರಿದಂತೆ ಇಂದಿನ ಯುವಜನತೆಯ ಸಹಕಾರವು ಅತ್ಯವಶ್ಯಕವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ. ಸೀನಪ್ಪ ಅಭಿಪ್ರಾಯಪಟ್ಟರು. ಕೊಡಗು ವಿಶ್ವವಿದ್ಯಾಲಯ ಮತ್ತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಚಿಕ್ಕಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತು ಬಳಕೆ ಮತ್ತು ಅಕ್ರಮ ಸಾಗಾಟ ವಿರೋಧಿ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.

ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಿಗಳಾಗಬಾರದು. ಕುಟುಂಬದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳಿಂದ ಅತ್ಯಂತ ಜಾಗೃತರಾಗಿರಬೇಕು. ಸ್ವಸ್ಥ ಸಮಾಜದಲ್ಲಿ ಆರೋಗ್ಯವಂತ ಜೀವನವನ್ನು ನಡೆಸಬೇಕು ಎಂದರು.

ಸೋಮವಾರಪೇಟೆ ವಿಭಾಗದ ಪೋಲೀಸ್ ಉಪ ಅಧೀಕ್ಷಕ ಆರ್. ವಿ. ಗಂಗಾಧರಪ್ಪ ಮಾತನಾಡಿ, ಮಾದಕ ವಸ್ತುಗಳ ದುರ್ಬಳಕೆ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನವನ್ನು ವಿಶ್ವ ಮಾದಕ ವಸ್ತು ಬಳಕೆ ವಿರೋಧಿ ದಿನ ಎಂದು ಕರೆಯಲಾಗುತ್ತದೆ. ಇದನ್ನು ಪ್ರತಿ ವರ್ಷ ಜೂನ್ ೨೬ ರಂದು ಮಾದಕ ವ್ಯಸನ ಮುಕ್ತ ಜಗತ್ತನ್ನು ನಿರ್ಮಿಸಲು ಕ್ರಮ ಮತ್ತು ಸಹಕಾರವನ್ನು ಬಲಪಡಿಸಲು ಆಚರಿಲಾಗುತ್ತದೆ. ಸಮಾಜದ ಜವಾಬ್ದಾರಿಯುತ ಪ್ರಜೆಯಾಗಿ ಮಾದಕ ವಸ್ತುಗಳ ಮಾರಾಟ ಮತ್ತು ಅಕ್ರಮ ಸಾಗಾಟದಂತಹ ಪ್ರಕರಣಗಳು ಕಂಡು ಬಂದರೆ ತತ್‌ಕ್ಷಣ ಪೋಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಮಾದಕ ದ್ರವ್ಯ ಹಾಗೂ ಮಾದಕ ವಸ್ತುಗಳ ಮಾರಾಟ, ಬಳಸುವಿಕೆಯನ್ನು ತಡೆಯುವಲ್ಲಿ ಯುವಜನತೆಯು ಪ್ರಮುಖ ಪಾತ್ರ ವಹಿಸಿ, ಮಾದಕ ವಸ್ತುಗಳ ಮುಕ್ತ ಸಮಾಜ ನಿರ್ಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ರಾಜೇಶ್ ಕೊಟ್ಯಾನ್ ಮಾತನಾಡಿ, ವಿಶ್ವದಾದ್ಯಂತ ಮಾದಕ ವಸ್ತುಗಳ ದುಶ್ಚಟಗಳಿಗೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಎಂದು ಗೊತ್ತಿದ್ದರೂ ಇದರ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ಸಾರ್ವಜನಿಕರ ಸಹಕಾರ ಅಷ್ಟೇ ಪ್ರಮುಖವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳನ್ನು ಬಳಸುವುದಿಲ್ಲವೆಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಮೋಹನ್ ರಾಜು ಪಿ., ಉಪನ್ಯಾಸಕ ಡಾ. ಜಮೀರ್ ಅಹಮ್ಮದ್, ಪೊಲೀಸ್ ಇಲಾಖೆಯ ಸಿಬ್ಬಂದಿ, ಕೊಡಗು ವಿಶ್ವವಿದ್ಯಾಲಯದ ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.