ಜಿಲ್ಲೆ

ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು: ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು

ಆರ್.ಕೃಷ್ಣ

ಮೈಸೂರು: ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು ಮತ್ತು ಕಾವೇರಿ ಚಾರಿಟಬಲ್ ಟ್ರಸ್ಟ್‌ನಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಈ ಸಂದರ್ಭ ಮಾತನಾಡಿ, ಮಕ್ಕಳಿಗೆ ಸಂಸ್ಕಾರದೊಂದಿಗೆ ವಿದ್ಯೆಯನ್ನು ನೀಡುತ್ತಿರುವ ಪ್ರತಿಷ್ಠಿತ ಸಂಸ್ಥೆಯಾಗಿ ಸದ್ವಿದ್ಯಾ ಹೆಸರು ಮಾಡಿರುವುದು ಮಾದರಿ ಎಂದರು.

ಪಾಲಕರು ಮಕ್ಕಳಿಗೆ ಏನು ಬೇಕಾಗಿದೆ ಎಂದು ತಿಳಿದುಕೊಳ್ಳಬೇಕು, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲ ಚಟುವಟಿಕೆಯಿಂದ ಇರುವಂತೆ ಶಿಕ್ಷಣ ಸಂಸ್ಥೆಗಳು ಗಮನ ಹರಿಸಬೇಕು ಎಂದು ಹೇಳಿದರು.

ಮಕ್ಕಳ ಅತಿ ಗಂಭೀರ ಸ್ವಭಾವವೂ ಒಂದು ನ್ಯೂನತೆ ಆಗಬಹುದು. ಅದನ್ನು ಗಮನಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಸದೃಢ ಶರೀರದಲ್ಲಿ ಸದೃಢ ಮನಸ್ಸು ನೆಲೆಸುವಂತೆ ಮಾಡಬೇಕು ಎಂದರು.

ಹೋಲಿಕೆ ಮಾಡಬೇಡಿ: ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಅಥ್ಲಿಟ್ ರೀನಾ ಜಾರ್ಜ್ ಮಾತನಾಡಿ, ಕ್ರೀಡೆಯು ಯಶಸ್ಸಿನ ಕೀಲಿಯಾಗಿದೆ. ಜೀವನಕ್ಕೆ ಶಿಸ್ತನ್ನು ತುಂಬುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡದೇ ಅವರ ಇಷ್ಟದ ಉತ್ತಮ ಹವ್ಯಾಸಗಳನ್ನು ಪ್ರೋತ್ಸ್ಸಾಹಿಸಬೇಕು ಎಂದರು.

ಬದ್ಧತೆ ಇರಲಿ: ಅಧ್ಯಕ್ಷತೆ ವಹಿಸಿದ್ದ ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು ಮತ್ತು ಕಾವೇರಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಎಂ.ಎಸ್.ಕೆ.ನರಹರಿ ಬಾಬು ಮಾತನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿ ಗುಕೇಶ್ ದೊಮ್ಮರಾಜು ಅವರಂತೆ ನೀವುಗಳೂ ವಿಶ್ವ ಚಾಂಪಿಯನ್ ಆಗಲು ಶ್ರಮಿಸಬೇಕು ಎಂದು ಕ್ರೀಡಾ ಪಟುಗಳಿಗೆ ಸಲಹೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಶ್ರಮದಿಂದ ಸಾಧನೆ ಮಾಡಲು ಸಿದ್ಧರಾಗಬೇಕು, ಸಮರ್ಪಣೆ ಮತ್ತು ಬದ್ಧತೆ ಇದ್ದರೆ ಸಾಧನೆ ಸುಲಭ ಎಂದು ಹೇಳಿದರು.

ಪ್ರಮಾಣ ವಚನ ಸ್ವೀಕಾರ: ಸಂಸ್ಥೆ ಕಾರ್ಯದರ್ಶಿ ಎಂ.ಡಿ.ಗೋಪಿನಾಥ್ ಮಾರ್ಗದರ್ಶನದಲ್ಲಿ ಕ್ರೀಡಾಪಟುಗಳು ಪ್ರಮಾಣ ವಚನ ಸ್ವೀಕರಿಸಿದರು. ಸಂಸ್ಥೆ ಉಪಾಧ್ಯಕ್ಷ ಎಸ್.ಬಾಲಾಜಿ, ಸಹ ಕಾರ್ಯದರ್ಶಿ ಕೆ.ಎನ್.ಫಣೀಶ್, ಆಡಳಿತ ಮಂಡಳಿ ಸದಸ್ಯರಾದ ಸಿ.ಆರ್.ನಾಗರಾಜ್, ಡಾ.ನಳಿನಿ ಚಂದರ್, ಆರ್.ಎಸ್.ಪ್ರಸನ್ನ ಇತರರು ಇದ್ದರು. ಆಡಳಿತ ಮಂಡಳಿ ಸದಸ್ಯರು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.