ಕೇಶವಮೂರ್ತಿ ವಿ.ಬಿ. ಹಾವೇರಿ
ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿ ವತಿಯಿಂದ ಲೇಬರ್ ಕಾರ್ಡ್ ಹೊಂದಿದವರ ಮಕ್ಕಳಿಗೆ ಉಚಿತವಾಗಿ ಕೊಡಲು ಉದ್ದೇಶಿಸಿರುವ ಲ್ಯಾಪ್ಟಾಪ್ ಅರ್ಜಿ ಸಲ್ಲಿಕೆಗಾಗಿ ಕಾರ್ವಿುಕ ಇಲಾಖೆ ಕಚೇರಿಯಲ್ಲಿ ನೂಕು ನುಗ್ಗಲು ಉಂಟಾಗಿದೆ. ನಿತ್ಯ ನೂರಾರು ವಿದ್ಯಾರ್ಥಿಗಳು, ಪಾಲಕರು ಅರ್ಜಿಗಾಗಿ ಕಚೇರಿಯತ್ತ ಮುಗಿಬಿದ್ದಿದ್ದಾರೆ.
2023-24ನೇ ಸಾಲಿನಲ್ಲಿ ಪ್ರಥಮ ಅಥವಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವವರಿಗಾಗಿ ಕಾರ್ವಿುಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿ ವತಿಯಿಂದ ಲ್ಯಾಪ್ಟಾಪ್ ನೀಡಲಾಗುತ್ತಿದೆ. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ನೇತೃತ್ವದ ಸಮಿತಿ ಫಲಾನುಭವಿಗಳ ಆಯ್ಕೆ ಮಾಡುತ್ತದೆ.
ಎಲ್ಲ ತಾಲೂಕುಗಳ ಕಾರ್ವಿುಕ ನಿರೀಕ್ಷಕರ ಕಚೇರಿಯಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ನಮೂನೆ ಹಾಗೂ ಸ್ವಯಂ ಘೊಷಣಾ ಪತ್ರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಬೇಕು. ಅದರ ಜತೆಗೆ ಎಸ್ಎಸ್ಎಲ್ಸಿ (ಶಾಲಾ ದೃಢೀಕೃತ), ಸ್ಟಡಿ ಸರ್ಟಿಫಿಕೇಟ್, ಫಲಾನುಭವಿ ಮತ್ತು ಮಕ್ಕಳ ಆಧಾರ್ ಕಾರ್ಡ್, ಲೇಬರ್ ಕಾರ್ಡ್ ಪ್ರತಿಗಳ ಸ್ವಯಂ ದೃಢೀಕೃತ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಪ್ರತಿ ತಾಲೂಕಿನ ಕಾರ್ವಿುಕ ನಿರೀಕ್ಷಕರ ಕಚೇರಿಗಳಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು, ಪಾಲಕರು ಆಗಮಿಸುತ್ತಿದ್ದಾರೆ. ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಾರ್ವಿುಕ ಇಲಾಖೆ ಕಚೇರಿಯಲ್ಲಿ ಗುರುವಾರ ಒಂದೇ ದಿನ 350ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಜಿಲ್ಲೆಯಲ್ಲಿ ಬರೋಬ್ಬರಿ 2.84 ಲಕ್ಷ ಕಾರ್ವಿುಕ ಕಾರ್ಡ್ಗಳಿವೆ. ಆದರೆ, ಜಿಲ್ಲೆಗೆ ಕೇವಲ 250 ಲ್ಯಾಪ್ಟಾಪ್ ಬಂದಿವೆ. ಅರ್ಹರನ್ನು ಆಯ್ಕೆ ಮಾಡುವುದೇ ಸವಾಲಿನ ಕೆಲಸವಾಗಿದೆ. 250ರಲ್ಲಿ 8 ತಾಲೂಕಿಗೆ ಸಮನಾಗಿ ಹಂಚಲಾಗುತ್ತದೆ. ಒಂದು ತಾಲೂಕಿಗೆ ಅಂದಾಜು 31 ಲ್ಯಾಪ್ಟಾಪ್ ಬರುತ್ತವೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ವಿಭಾಗದ ವಿದ್ಯಾರ್ಥಿಗಳಿಗೆ ಸಮಾನವಾಗಿ ಆಯ್ಕೆ ಮಾಡಲಾಗುತ್ತದೆ.
ಲೇಬರ್ ಕಾರ್ಡ್ ಹೊಂದಿರುವವರ ಮಕ್ಕಳು ಲ್ಯಾಪ್ಟಾಪ್ಗಾಗಿ ಅರ್ಜಿ ಸಲ್ಲಿಸಿರುತ್ತಾರೆ. ಇದರಲ್ಲಿ ಎಸ್ಎಸ್ಎಲ್ಸಿ ಅಂಕಪಟ್ಟಿ ಆಧಾರದಲ್ಲಿ ಮೆರಿಟ್ ಮೇಲೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮಾರ್ಚ್ 2023ಕ್ಕಿಂತ ಮೊದಲು ಕಾರ್ಡ್ ಮಾಡಿಸಿರಬೇಕು. ನೋಂದಣಿಯಾದ ತಾಲೂಕಿನಲ್ಲೇ ಇರುವವರನ್ನು ಆಯ್ಕೆ ಮಾಡಲಾಗುವುದು. ಒಂದೇ ಅಂಕ ಪಡೆದ ಐದಾರು ಜನ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಲ್ಲಿ ಮೊದಲು ಯಾರು ಲೇಬರ್ ಕಾರ್ಡ್ ಮಾಡಿಸಿರುತ್ತಾರೋ ಅಂಥವರನ್ನು ಆಯ್ಕೆ ಮಾಡಲಾಗುತ್ತದೆ.
ನನ್ನ ಮಗ ಅಥವಾ ಮಗಳಿಗೆ ಲ್ಯಾಪ್ಟಾಪ್ ಕೊಡುವಂತೆ ಕಾರ್ವಿುಕ ಇಲಾಖೆಗೆ ಪತ್ರ ಕೊಡಿ ಎಂದು ಲೇಬರ್ ಕಾರ್ಡ್ ಹೊಂದಿದ ಹಲವರು ತಮ್ಮ ಕ್ಷೇತ್ರದ ಶಾಸಕರ ದುಂಬಾಲು ಬೀಳುತ್ತಿದ್ದಾರೆ. ಶಾಸಕರು ಪತ್ರ ಕೊಟ್ಟರೂ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೂ ಕೆಲವರು ಕೇಳದೇ ಪತ್ರಕ್ಕಾಗಿ ಶಾಸಕರ ಮನೆ ಬಾಗಿಲು ಕಾಯುತ್ತಿದ್ದಾರೆ. ಇದರಿಂದ ಬೇಸತ್ತ ಕೆಲ ಶಾಸಕರು ಕಾರ್ವಿುಕ ಇಲಾಖೆಯಿಂದ ಆದೇಶ ಪತ್ರ ತರಿಸಿ, ಮನೆಯ ಗೋಡೆಗೆ ಅಂಟಿಸಲು ಮುಂದಾಗಿದ್ದಾರೆ.
ಸೆ. 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, 22ರವರೆಗೆ ಆಯಾ ತಾಲೂಕಿನ ಕಾರ್ವಿುಕ ನಿರೀಕ್ಷಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಎಡಿಸಿ ಅವರ ನೇತೃತ್ವದಲ್ಲಿ ಅರ್ಹ ಫಲಾನುಭವಿಗಳನ್ನು ಶೀಘ್ರವೇ ಆಯ್ಕೆ ಮಾಡಿ ಲ್ಯಾಪ್ಟಾಪ್ ಹಂಚಿಕೆ ಮಾಡಲಾಗುವುದು. | ಮಹೇಶ ಕುಳಲಿ, ಜಿಲ್ಲಾ ಕಾರ್ವಿುಕ ಅಧಿಕಾರಿ ಹಾವೇರಿ ಜಿಲ್ಲೆ ಕರ್ಜಗಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದೇನೆ. ಲ್ಯಾಪ್ಟಾಪ್ ಸೌಲಭ್ಯಕ್ಕಾಗಿ ನಾನೂ ಅರ್ಜಿ ಸಲ್ಲಿಸಿದ್ದೇನೆ. ನನಗೂ ಲ್ಯಾಪ್ಟಾಪ್ ಸಿಗುವ ವಿಶ್ವಾಸವಿದೆ. | ಕವನಾ ಮೂಲಿಕೇರಿ, ವಿದ್ಯಾರ್ಥಿನಿ, ಕಳಗೊಂಡ, ಬ್ಯಾಡಗಿ