ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿಯರು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥನಿಯರಾದ ಲಲಿತಾ, ಸವಿತಾ, ಮಹಾಲಕ್ಷ್ಮೀ, ಹನುಮಮ್ಮ ಇದ್ದರು. 
ಜಿಲ್ಲೆ

ಅಧಿಕಾರಿಗಳ ಎಡವಟ್ಟು: ದಿಢೀರ್ ಪ್ರತಿಭಟಿಸಿದ ವಿದ್ಯಾರ್ಥಿನಿಯರು

STUDENTS PROTEST HOSTEL DC OFFICE KOPPAL

Kopala - Raveendra V K

ಕೊಪ್ಪಳ: ಊಟದಲ್ಲಿ ಹುಳುಗಳು ಬರುತ್ತಿದ್ದು, ಮೂಲ ಸೌಕರ್ಯ ಸಮಪರ್ಕವಾಗಿಲ್ಲ. ಕೂಡಲೇ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ನಗರದ ಫಿರ್ದೋಸ್ ನಗರದ ಮೆಟ್ರಿಕ್ ನಂತರದ ಪಜಾ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.

ನಿತ್ಯ ಊಟದಲ್ಲಿ ಹುಳು ಬರುತ್ತಿವೆ. ಈ ಬಗ್ಗೆ ಅಡುಗೆ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕುಡಿವ ನೀರು ಶುದ್ಧವಾಗಿಲ್ಲ. ಟ್ಯಾಂಕ್ ಸ್ವಚ್ಛಗೊಳಿಸುತ್ತಿಲ್ಲ. 100 ವಿದ್ಯಾರ್ಥಿಗಳಿಗೆ ಸಾಕಾಗುವಷ್ಟು ಸೌಕರ್ಯಗಳಿವೆ. ಆದರೆ, 289 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದಾರೆ. ಪರಿಣಾಮ ಉತ್ತಮ ಊಟ, ಶೌಚಗೃಹ, ಸ್ನಾನಗೃಹಗಳು ಇಲ್ಲದಂತಾಗಿದೆ. ಪದೇ ಪದೆ ಸಮಸ್ಯೆಗಳಾಗುತ್ತಿವೆ. ವಾರ್ಡನ್ ಗಮನಕ್ಕೆ ವಿಷಯ ತಂದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.

ವಿಷಯ ತಿಳಿದ ಎಡಿಸಿ ಸಾವಿತ್ರಿ ಕಡಿ, ತಕ್ಷಣ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹಾಸ್ಟೆಲ್‌ಗೆ ತೆರಳಿ ಸಮಸ್ಯೆ ಸರಿಪಡಿಸಲು ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಜುಹಾರ, ಅಡುಗೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ದಿನಸಿ ಸ್ವಚ್ಛಗೊಳಿಸಿ ಅಡುಗೆ ಮಾಡುವಂತೆ ತಾಕೀತು ಮಾಡಿದರು. ವಾರ್ಡ್‌ನಗೆ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿ, ಪರಿಹಾರ ಒದಗಿಸುವಂತೆ ತಿಳಿಸಿದರು. ವಿದ್ಯಾರ್ಥಿನಿಯರ ಸಂಖ್ಯೆ ಅಧಿಕ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಹಾಸ್ಟೆಲ್‌ಗೆ ಪ್ರಸ್ತಾವನೆ ಸಲ್ಲಿಸಿದ್ದಾಗಿ ಮಾಹಿತಿ ನೀಡಿದರು.

ಬಳಿಕ ಪ್ರತಿಭಟನೆ ಮೊಟಕುಗೊಳಿಸಿದ ವಿದ್ಯಾರ್ಥಿನಿಯರು ಹಾಸ್ಟೆಲ್‌ಗೆ ತೆರಳಿದರು.