ಜಿಲ್ಲೆ

ಬಸ್ ವ್ಯವಸ್ಥೆಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಸೌಮ್ಯ ಆರ್

ಸುಬ್ರಹ್ಮಣ್ಯ: ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸಿನ ಅವ್ಯವಸ್ಥೆ ಅಸಮರ್ಪಕವಾಗಿದೆ. ಸುಬ್ರಹ್ಮಣ್ಯದಿಂದ ತೆರಳಲು ಸೂಕ್ತ ಬಸ್ ವ್ಯವಸ್ಥೆ ಮಾಡಬೇಕು ಎಂದು ಗುರುವಾರ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು.

ಸುಬ್ರಹ್ಮಣ್ಯದಿಂದ ಬೆಳಗ್ಗೆ ಹಾಗೂ ಸಂಜೆಯ ಸಮಯ ಬಸ್ಸಿನ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಬಸ್ಸಿನ ವ್ಯವಸ್ಥೆ ಸರಿಪಡಿಸಬೇಕಾಗಿ ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಕಾಲ್ನಡಿಗೆ ಮೂಲಕ ಹೊರಟ ವಿದ್ಯಾರ್ಥಿಗಳ ಜಾಥಾ ಮುಖ್ಯರಸ್ತೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ನಿಲ್ದಾಣದವರೆಗೆ ಆಗಮಿಸಿತು. ಇಲ್ಲಿ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಮಾತನಾಡಿದರು. ಬಳಿಕ ಸುಬ್ರಹ್ಮಣ್ಯ ಬಸ್ ನಿಲ್ದಾಣದ ಸಂಚಾರ ನಿಯಂತ್ರಣ ಅಧಿಕಾರಿಗಳಾದ ಬಾಬು ಹಾಗೂ ರಾಮಚಂದ್ರ ಪ್ರತಿಭಟನಾಕಾರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.

ವಿದ್ಯಾರ್ಥಿಗಳು ಬಸ್ಸಿನ ಅವ್ಯವಸ್ಥೆ ಬಗ್ಗೆ ವಿವರಿಸಿದರು. ಈ ಹಿಂದೆ ಎಷ್ಟೇ ಮನವಿ ಸಲ್ಲಿಸಿದರೂ ಏನು ಪ್ರಯೋಜನ ಆಗಿಲ್ಲ. ಬೆಳಗ್ಗೆ ಕಾಲೇಜಿಗೆ ಬರಲು ಹಾಗೂ ಸಂಜೆ ಮನೆಗೆ ತಲುಪಲು ತುಂಬಾ ತೊಂದರೆ ಆಗುತ್ತಿದೆ. ಬಸ್ ಡ್ರೈವರ್‌ಗಳು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸನ್ನು ಸರಿಯಾಗಿ ನಿಲ್ಲಿಸುತ್ತಿಲ್ಲ. ಇದು ಹೀಗೆ ಮುಂದುವರಿದರೆ ನಾವು ಸುಮ್ಮನಿರುವುದಿಲ್ಲ, ಒಂದು ವಾರದ ಒಳಗೆ ಬಸ್ಸಿನ ವ್ಯವಸ್ಥೆ ಸರಿಪಡಿಸಬೇಕು ಇಲ್ಲದಿದ್ದಲ್ಲಿ ಮುಂದೆ ತೀವ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿ ಸುಳ್ಯ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಂಚಾರ ನಿಯಂತ್ರಣ ಅಧಿಕಾರಿ ಬಾಬು ಕೂಡಲೇ ಶಿಫಾರಸ್ಸಿನೊಂದಿಗೆ ಉನ್ನತ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಬಸ್ಸಿನ ಸಮಸ್ಯೆಯನ್ನು ಮನವರಿಕೆ ಮಾಡಿ ಎರಡು ವಾರಗಳ ಒಳಗೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆ ನೇತೃತ್ವವನ್ನು ಕಾಲೇಜಿನ ವಿದ್ಯಾರ್ಥಿ ನಾಯಕರು ಹಾಗೂ ಎಬಿವಿಪಿ ಪದಾಧಿಕಾರಿಗಳಾದ ಶ್ರೀಜಿತ್, ನಂದಕುಮಾರ್, ದಿಶಾಂತ್, ಕಾರ್ತಿಕ್, ಹೇಮಂತ್ ಹಾಗೂ ಪ್ರೀತೇಶ್ ವಹಿಸಿದ್ದರು.