ಅಣ್ಣಿಗೇರಿ: ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಸೈದಾಪುರ ಗ್ರಾಮದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಸಂಚರಿಸಲು ಸರಿಯಾದ ಬಸ್ ಸೌಕರ್ಯವಿಲ್ಲದೆ, ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲೇ ಸ್ಥಗಿತಗೊಳಿಸುವಂತಾಗಿದೆ. ಗ್ರಾಮಕ್ಕೆ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಶಾಲಾ-ಕಾಲೇಜುಗಳಿಗೆ ಗೈರಾಗುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಬೇಡಿಕೆಗೆ ಸಾರಿಗೆ ಇಲಾಖೆ ಸ್ಪಂದನೆ ಮಾಡದಿದ್ದರೆ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಯಲ್ಲಪ್ಪ ದುಂದೂರ್, ಮುಖಂಡ ಅಂದಾನಿಗೌಡ, ಬಿ. ಎನ್. ಖುದವೊಂದ, ಜಿ. ಎಫ್. ಅಣ್ಣಿಗೇರಿ, ಐ. ಎಚ್. ಬಂಡೆಪ್ಪನವರ್, ಎ. ಬಿ. ಗುಂಗುಳಿ, ನಾಗಪ್ಪ ಹಂಚಿನಾಳ, ಆನಂದ ಪಟ್ಟಣ, ಎಸ್. ಆರ್. ಪಾಟೀಲ, ಎಲ್ಲಪ್ಪ ಕಂಬಳಿ, ಪ್ರಭು ದುಂದುರ, ಕೆ.ಎಸ್. ಅಂಗಡಿ, ಅಮೃತೇಶ್ವರ ಶಿಕ್ಷಣ ಸಂಸ್ಥೆ, ಬಾಪೂಜಿ ವಿದ್ಯಾನಿಕೇತನ, ನಿಂಗಮ್ಮ ಎಸ್. ಹೂಗಾರ, ಎಂ. ಬಿ. ಹಳ್ಳಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಸೈದಾಪುರಕ್ಕೆ ವಿದ್ಯಾರ್ಥಿಗಳ ಬೇಡಿಕೆಗನುಸಾರ ಶಾಲಾ, ಕಾಲೇಜುಗಳಿಗೆ ಹೋಗಿ ಬರುವ ಅವಧಿಯಲ್ಲಿ ಬಸ್ ಸೌಲಭ್ಯ ಕಲ್ಪಿಸಲಾಗುವುದು. ಈಗಾಗಲೇ ಲಕ್ಷೆ್ಮೕಶ್ವರ ಘಟಕಕ್ಕೂ ಬಸ್ ಕಳಿಸುವಂತೆ ತಿಳಿಸಲಾಗಿದೆ. | ಭರಮಗೌಡರ, ಸಾರಿಗೆ ನಿಯಂತ್ರಕರು ನವಲಗುಂದ