ಬಸ್‌ನಲ್ಲಿ ಪುರುಷರಿಗೆ ಶೇ.50 ಸೀಟು ನೀಡಬೇಕು ಎಂದು ಒತ್ತಾಯಿಸಿ ಸೊರಬದಲ್ಲಿ ಕೆಎಸ್‌ಆರ್‌ಟಿಸಿ ಬಸ್ ತಡೆಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಶೇ.50 ಸೀಟಿಗೆ ಆಗ್ರಹ; ಕೆಎಸ್‌ಆರ್‌ಟಿಸಿ ಬಸ್ ತಡೆಹಿಡಿದು ವಿದ್ಯಾರ್ಥಿಗಳ ಪ್ರತಿಭಟನೆ

Shivamogga - Desk - Vinayakumar D B

ಸೊರಬ: ಉಚಿತ ಬಸ್ ಪ್ರಯಾಣದ ಬಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ತಟ್ಟಿದ್ದು, ವಿದ್ಯಾರ್ಥಿನಿಯರೇ ತುಂಬಿರುವ ಬಸ್ಸಿನಲ್ಲಿ ಪುರುಷರಿಗೆ ಶೇ.50 ಸೀಟು ನೀಡಬೇಕು ಎಂದು ಮಂಗಳವಾರ ಬೆಳಗ್ಗೆ ಸೊರಬದಲ್ಲಿ ಬಸ್ ತಡೆಹಿಡಿದು ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಸೊರಬದಿಂದ ಉಳವಿ ಮಾರ್ಗವಾಗಿ ಸಾಗರಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಶಕ್ತಿ ಯೋಜನೆ ಜಾರಿ ಬಳಿಕ ಪ್ರಯಾಣಿಸುವ ವಿದ್ಯಾರ್ಥಿನಿಯರ ಸಂಖ್ಯೆಯೂ ಹೆಚ್ಚಾಗಿದೆ. ಈ ನಡುವೆ ಬಸ್‌ನ ಎಲ್ಲ ಸೀಟಿನಲ್ಲೂ ವಿದ್ಯಾರ್ಥಿನಿಯರೇ ಕೂರುತ್ತಿದ್ದು, ವಿದ್ಯಾರ್ಥಿಗಳಿಗೆ ಸೀಟು ನೀಡುತ್ತಿಲ್ಲ ಎಂದು ಆರೋಪಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ 112 ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬಸ್ ನಿರ್ವಾಹಕ ಧನಂಜಯ್ ಮಾತನಾಡಿ, ವಿದ್ಯಾರ್ಥಿಗಳು ಬಸ್ಸನ್ನು ರಸ್ತೆ ಬದಿ ನಿಲ್ಲಿಸಲು ಬಿಡುತ್ತಿಲ್ಲ. ನೂಕು ನುಗ್ಗಲಲ್ಲಿ ಬಸ್ ಏರುತ್ತಾರೆ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬಳು ಬಸ್ ಏರುವಾಗ ಬಿದ್ದರೂ ಗಮನಿಸದೇ ಅವಳನ್ನು ತುಳಿಯುತ್ತಲೇ ಬಸ್ ಏರಿದರು. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಇದೀಗ ವಿದ್ಯಾರ್ಥಿನಿಯರು ಹೆಚ್ಚಿರುವ ಬಸ್‌ನಲ್ಲಿ ಶೇ.50 ಮೀಸಲಾತಿ ನೀಡುವಂತೆ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ನಿತ್ಯ ಕರ್ತವ್ಯ ನಿರ್ವಹಿಸುವುದೇ ಕಷ್ಟವಾಗಿದೆ ಎಂದರು.

ವಿದ್ಯಾರ್ಥಿಗಳು ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ. ನಿತ್ಯ ಬಸ್ ನಿಲ್ಲಿಸಲು ಬಿಡುವುದಿಲ್ಲ. ಬಸ್‌ನಲ್ಲಿ ವೃದ್ಧರು ಆಗಮಿಸಿದರೆ ಅವರಿಗೆ ಕನಿಷ್ಠ ಪಕ್ಷ ಸೀಟು ಬಿಡುವ ಸೌಜನ್ಯವೂ ತೋರುತ್ತಿಲ್ಲ.ಮಹಾಬಲೇಶ್ವರ, ಚಾಲಕ