ಜಿಲ್ಲೆ

ಬಸ್ ಸಂಚಾರ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ, ನರಗುಂದ ಸಾರಿಗೆ ಘಟಕಕ್ಕೆ ಮುತ್ತಿಗೆ

Gadag - Desk - Tippanna Avadoot

ನರಗುಂದ: ಸಮಯಕ್ಕೆ ಸರಿಯಾಗಿ ಬಸ್ ಬಾರದ್ದಕ್ಕೆ ಆಕ್ರೋಶಗೊಂಡ ನೂರಾರು ಕಾಲೇಜ್ ವಿದ್ಯಾರ್ಥಿಗಳು ಪಟ್ಟಣದ ಸಾರಿಗೆ ಘಟಕದ ಮುಂದೆ ಬಸ್ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಕುರ್ಲಗೇರಿ, ಧಾರವಾಡ ಜಿಲ್ಲೆಯ ತಡಹಾಳ, ಕೊಂಗವಾಡ, ಆರಟ್ಟಿ, ನಾಯಕನೂರ ಮುಂತಾದ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಸಾರಿಗೆ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ವಿದ್ಯಾರ್ಥಿಗಳು ಮಾತನಾಡಿ, ಅ. 23ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅರ್ಧವಾರ್ಷಿಕ ಪರೀಕ್ಷೆ ಪ್ರಾರಂಭಗೊಂಡಿದ್ದು, ನ. 6ರ ವರೆಗೆ ನಡೆಯಲಿವೆ. ತಾಲೂಕಿನ ಕುರ್ಲಗೇರಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್​ಗಳನ್ನು ಬಿಡದ ಕಾರಣ ಈ ಮಾರ್ಗವಾಗಿ ನರಗುಂದದ ವಿವಿಧ ಕಾಲೇಜ್​ಗಳಿಗೆ ಆಗಮಿಸುವ ವಿದ್ಯಾರ್ಥಿಗಳ ಪಾಡು ಯಾರಿಗೂ ಹೇಳತಿರದಂತಾಗಿದೆ. ನಿರಂತರ ಮಳೆ, ಬೆಣ್ಣೆಹಳ್ಳದ ಭೀಕರ ಪ್ರವಾಹದಿಂದ ಕುರ್ಲಗೇರಿ- ತಡಹಾಳ ಮಧ್ಯದ ಸೇತುವೆಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಪರಿಣಾಮ ನರಗುಂದ ಕುರ್ಲಗೇರಿ ಮಾರ್ಗವಾಗಿ ಪ್ರತಿನಿತ್ಯ ಸಂಚರಿಸುತ್ತಿದ್ದ 10 ಬಸ್​ಗಳ ಸಂಚಾರವು ಸ್ಥಗಿತಗೊಂಡಿದೆ. ಈಗ ಪರೀಕ್ಷೆಗಳಿರುವುದರಿಂದ ಕುರ್ಲಗೇರಿ ಹಾಗೂ ಈ ಮಾರ್ಗವಾಗಿ ಸಂಚರಿಸುತ್ತಿದ್ದ ಧಾರವಾಡ ಜಿಲ್ಲೆಯ ತಡಹಾಳ, ಕೊಂಗವಾಡ, ಆರಟ್ಟಿ, ನಾಯ್ಕನೂರ ಮುಂತಾದ ಗ್ರಾಮಗಳ ಶಾಲೆ, ಕಾಲೇಜ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎರಡ್ಮೂರು ಕಿಲೋ ಮೀಟರ್ ಕಾಲ್ನಡಿಗೆ ನಡೆದು ನರಗುಂದಕ್ಕೆ ಆಗಮಿಸುವ ಪರಿಸ್ಥಿತಿ ನಿರ್ವಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸುನೀತಾ ಈಟಿ, ಸುಮಿತ್ರಾ ಯರೆಕಿತ್ತೂರ, ಸಾನಿಯಾ ನದಾಫ, ವೀರೂಪಾಕ್ಷಿ ಮಣಕವಾಡ, ರಫೀಕ ಮುಲ್ಲಾನವರ, ಎಲ್.ಎಸ್. ಕುದರಿ, ಶಿವಾನಂದ ಹೆಬ್ಬಾಳ, ಪ್ರದೀಪ ಪೂಜಾರ, ಮೈಲಾರೆಪ್ಪ ಗಡ್ಡಿ, ಮುತ್ತು ಹಿರೇಮನಿ, ಸೌಮ್ಯ, ಸೌಜನ್ಯ ಕುಂಬಾರ ಇತರರಿದ್ದರು.