ಕೆರೂರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಲ್ಕು ಜನ ಉಪನ್ಯಾಸಕರ ವರ್ಗಾವಣೆ ವಿರೋಧಿಸಿ ಶನಿವಾರ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಉಪನ್ಯಾಸಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Vijayapura - Desk - Gurappa Lokuri

ಕೆರೂರ: ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 4 ಜನ ಉಪನ್ಯಾಸಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹಾಜರಾಗಿದ್ದ ಉಪನ್ಯಾಸಕರ ವರ್ಗಾವಣೆ ವಿಷಯ ತಿಳಿಯುತ್ತಿದ್ದಂತೆ ತರಗತಿಗಳನ್ನು ಬಹಿಷ್ಕರಿಸಿ ಕಾಲೇಜಿನ ಆವರಣದಲ್ಲಿ ಸೇರಿದ್ದ ಎಲ್ಲ ವಿದ್ಯಾರ್ಥಿಗಳು ವರ್ಗಾವಣೆ ಖಂಡಿ ವಿರೋಧ ವ್ಯಕ್ತಪಡಿಸಿದರು.

ಸರ್ಕಾರ ಕಡ್ಡಾಯ ವರ್ಗಾವಣೆ ನೆಪದಲ್ಲಿ ಏಕಾಏಕಿ ನಾಲ್ವರು ಉಪನ್ಯಾಸಕರನ್ನು ವರ್ಗಾವಣೆ ಮಾಡಿರುವುದು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ನೋವುಂಟು ಮಾಡಿದೆ ಎಂದು ದೂರಿದರು.

ನಮ್ಮ ಉಪನ್ಯಾಸಕರಾದ ಮಲ್ಲಪ್ಪ ಹೊಸುರ, ಶಿವಶಂಕರ ಸೂಳಿಕೇರಿ, ಜಗದೀಶ್, ವಿಶ್ವನಾಥ ಕೊಳೂರ ಅವರು ಪಾಠ ಬೋಧನೆ ಮಾಡುವುದಷ್ಟೇಯಲ್ಲದೆ ಕಾಲೇಜಿನ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದರು. ಇಂತಹ ಉಪನ್ಯಾಸಕರನ್ನು ವರ್ಗಾವಣೆ ಮಾಡಿರುವ ಉನ್ನತ ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೂಡಲೇ ಸರ್ಕಾರ ವರ್ಗಾವಣೆ ಆದೇಶ ಹಿಂಪಡೆಯದಿದ್ದಲ್ಲಿ ವಿದ್ಯಾರ್ಥಿ ಪರಿಷತ್ ಸಂಘದೊಂದಿಗೆ ಉನ್ನತ ಶಿಕ್ಷಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.