ಹನೂರು: ಅರಣ್ಯ ಹಾಗೂ ವನ್ಯಜೀವಿಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದರೆ ಇದರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾಲುದಾರಿಕೆ ಬಹುಮುಖ್ಯ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಹೇಳಿದರು.
ಪಟ್ಟಣದ ಜಿ.ವಿ. ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸಿ.ವಿ ರಾಮನ್ ರಾಷ್ಟ್ರೀಯ ಹಸಿರು ಪಡೆ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಅರಣ್ಯ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಹಾಗೂ ವನ್ಯಜೀವಿಗಳು ಮನುಕುಲದ ಸಂಪತ್ತು. ಇದರ ಸಮೃದ್ಧಿ ಪರಿಸರದಲ್ಲಿ ಸಮತೋಲವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಬಹುದು. ಆದರೆ, ಈ ಬಗ್ಗೆ ಅರಿಯದ ಕೆಲವರು ಸ್ವ ಹಿತದೃಷ್ಟಿಯಿಂದ ಅರಣ್ಯ ಹಾಗೂ ವನ್ಯಜೀವಿಗಳು ನಶಿಸುವ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಕಾನೂನು ಬಾಹಿರ ಚಟುವಟಿಕೆಯಾಗಿದ್ದು, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅರಣ್ಯ ಇಲಾಖೆಯ ನಿಯಮಗಳಿಂದ ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದ್ದು, ಹನೂರು ಭಾಗದಲ್ಲಿ ಅರಣ್ಯ ಪ್ರದೇಶ ಸಮೃದ್ಧಿಯಿಂದ ಕೂಡಿದೆ. ಆದರೆ, ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರು ಅರಣ್ಯ ಪ್ರದೇಶದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುತ್ತಿದ್ದಾರೆ. ಇದು ವನ್ಯಜೀವಿಗಳ ಜೀವಕ್ಕೆ ಸಂಚಾಕಾರ ತರಲಿದೆ. ಜತೆಗೆ ಪರಿಸರದ ನಾಶಕ್ಕೆ ಕಾರಣವಾಗಲಿದೆ. ಇನ್ನು ಸಾಮಾನ್ಯ ಜನರು ಸಹ ತಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಕೈ ಚೀಲಗಳನ್ನು ಬಳಸುತ್ತಿದ್ದಾರೆ. ಇದು ಸಹ ಪರಿಸರದ ಮೇಲೆ ದುಷ್ಪಾರಿಣಾಮ ಬೀರಲಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಪಾಲಕರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಈ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ವನ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ಶಾಲೆಯ ಇಕೋ ಕ್ಲಬ್ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದ ಪ್ರವೀಣ್ ಅವರು ಎಲ್ಲೇಮಾಳದ ಮೀಸಲು ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಇದಕ್ಕೆ ಮುಖ್ಯ ಶಿಕ್ಷಕರು ಹಾಗೂ ಮಕ್ಕಳು ಸಮ್ಮತಿ ಸೂಚಿಸಿದರು.
ಶಿಕ್ಷಣ ಸಂಯೋಜಕ ಅಶೋಕ್, ಮುಖ್ಯಶಿಕ್ಷಕ ಮಹಾದೇವ, ಡಿಆರ್‌ಎಫ್‌ಒ ರಾಜೇಂದ್ರ ಪ್ರಸಾದ್, ಅರಣ್ಯರಕ್ಷಕ ಕೃಷ್ಣ, ಚಿನ್ನಸ್ವಾಮಿ, ಶಿಕ್ಷಕ ಶಾಂತರಾಜು, ಜಿ.ಲೋಕೇಶ್, ಪ್ರದೀಪ್, ಗೌತಮಿ ಇತರರು ಇದ್ದರು.