ದೇವನಹಳ್ಳಿ: ದಿನೇದಿನೆ ಪರಿಸರದಲ್ಲಿ ಆಗುತ್ತಿರುವ ಬದಲಾವಣೆ ಜತೆಗೆ ತಾಪಮಾನ ಏರಿಕೆ ಕಡಿಮೆ ಮಾಡುವ ಉದ್ದೇಶದಿಂದ ಕೇವಲ ಒಂದು ಗಂಟೆಯಲ್ಲಿ 40 ಸಾವಿರ ಗಿಡ ನೆಡುವ ಮೂಲಕ ಐಐಬಿಎಸ್ ಸಂಸ್ಥೆಯ ವಿದ್ಯಾರ್ಥಿಗಳು ವನಮಹೋತ್ಸವ ಆಚರಿಸಿದರು.
ಕೆಂಪೇಗೌಡ ವಿಮಾನ ನಿಲ್ದಾಣ ಬಳಿಯ ಐಐಬಿಎಸ್ ಶಿಕ್ಷಣ ಸಂಸ್ಥೆ ವತಿಯಿಂದ ಐಎಸ್‌ಆರ್ ನಿಧಿಯಲ್ಲಿ 40 ಸಾವಿರ ಗಿಡ ನೆಟ್ಟು ಪೋಷಣೆ ಮಾಡುವ ಸಂಕಲ್ಪ ಮಾಡಲಾಯಿತು.
ಶುಕ್ರವಾರ ಸಂಸ್ಥೆಯ ಸುತ್ತಮುತ್ತಲಿನ ಬಡಾವಣೆ ಹಾಗೂ ಪಾರ್ಕ್ ಜಾಗಗಳಲ್ಲಿ ಸಂಸ್ಥೆ ಮುಖ್ಯಸ್ಥ ಜಯಪ್ರಕಾಶ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ನೀರೆರೆದರು.
ತಾಪಮಾನ ಏರಿಕೆಯಿಂದ ಕಾಲಕಾಲಕ್ಕೆ ಮಳೆ, ಬೆಳೆಗಳಾಗದೆ ಜನ ಸಂಕಷ್ಟದಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡು
ಭವಿಷ್ಯಕ್ಕಾಗಿ ಪರಿಸರ ಉಳಿಸಲು 40 ಸಾವಿರ ಗಿಡಗಳ ನೆಡಲಾಗಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ ಸೇರಿ ಬೆಂಗಳೂರು ಗ್ರಾಮಾಂತರ ಮತ್ತು ನಗರ ಭಾಗದಲ್ಲಿ ವಿವಿಧೆಡೆ ಕಾಲೇಜಿನ ಒಂದು ಸಾವಿರಕ್ಕೂ ಅಧಿಕ ಯುವಕ, ಯುವತಿಯರು ಗಿಡ ನೆಡಲು ಮುಂದಾಗಿದ್ದು, ಗಿಡಗಳನ್ನ ನೆಟ್ಟು ಬಿಡುವುದಷ್ಟೇ ಅಲ್ಲ, ಜಿಯೋ ಟ್ರ್ಯಾಕಿಂಗ್ ಮೂಲಕ ಗಿಡಗಳ ಪೋಷಣೆ ಮತ್ತು ಸ್ಥಿತಿ ಗತಿಗಳ ಬಗ್ಗೆ ತಿಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಗಿಡಗಳನ್ನ ನೆಟ್ಟ ಪ್ರತಿಯೊಂದು ಗ್ರಾಮದಲ್ಲೂ ಒಬ್ಬೊಬ್ಬರನ್ನು ಗಿಡಗಳ ಪೋಷಣೆಗೆ ನೇಮಕ ಮಾಡಿ ಗಿಡಗಳಿಗೆ ಕಾಲಕಾಲಕ್ಕೆ ನೀರು, ಗೊಬ್ಬರ ಹಾಕುವ ಕೆಲಸ ಮಾಡಲಿದ್ದು, ಗಿಡಗಳು ಮರಗಳಾಗುವ ತನಕ ನಿಗಾ ವಹಿಸಲಾಗುವುದು ಎಂದು ಸಂಸ್ಥೆ ಮುಖ್ಯಸ್ಥ ಜಯಪ್ರಕಾಶ್ ತಿಳಿಸಿದರು.
ದೇವನಹಳ್ಳಿ ಐಐಬಿಎಸ್ ಸಂಸ್ಥೆಯಿಂದ ಗಿಡ ನೆಡಲಾಯಿತು. ಸಂಸ್ಥೆ ಮುಖ್ಯಸ್ಥ ಜಯಪ್ರಕಾಶ್, ವನಮಹೋತ್ಸವದಲ್ಲಿ ಪ್ರಾಂಶುಪಾಲ, ಶೈಕ್ಷಣಿಕ ನಿರ್ದೇಶಕ ಡಾ.ಟಿ.ಜಗ್ಗಯ್ಯ, ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ವರರೆಡ್ಡಿ, ಆಡಳಿತ ನಿರ್ದೇಶಕ ರಿಜ್ವಾನ್ ಅಲಿ, ಎನ್.ಎಸ್.ಎಸ್.ಅಧಿಕಾರಿ ಮುನಿಅಂಜಿನಪ್ಪ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.