ಚನ್ನಗಿರಿ: ಶಾಲಾಭಿವೃದ್ಧಿಗೆ ಪ್ರಾಚಾರ್ಯರು ಪಡೆದ ಸಾಲದ ಹಣ ಹಿಂದಿರುಗಿಸದ ಕಾರಣಕ್ಕೆ ತಾಲೂಕಿನ ಚಿಕ್ಕೂಲಿಕೆರೆ ಗ್ರಾಮದ ಶ್ರೀ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಹೊರ ಹಾಕಿ ಕೊಠಡಿಗಳಿಗೆ ಬೀಗ ಜಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಓದಿಗೆ ತೊಂದರೆ ಯಾಗುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಕಾಲೇಜು ತೆರೆಯುವಂತೆ ಮಂಗಳವಾರ ಪ್ರತಿಭಟನೆ ನಡೆಸಿದರು.
ವಿವರ: ಪ್ರಾಚಾರ್ಯು ರೂಪಾ ಮೂಲೆಮನೆ ಅವರು ದಾವಣಗೆರೆ ಬಸವರಾಜ್ ಎಂಬುವರಿಂದ 14 ತಿಂಗಳ ಹಿಂದೆ ಕಾಲೇಜು ಅಭಿವೃದ್ಧಿಗಾಗಿ ಕಾಲೇಜು ಕಟ್ಟಡ ಇರುವ 5 ಎಕರೆ 20 ಗುಂಟೆ ಜಮೀನು ಕ್ರಯ ಮಾಡಿಸಿ ಶೇ.2 ಬಡ್ಡಿಯಂತೆ 1.5 ಕೋಟಿ ರೂ. ಸಾಲ ಪಡೆದಿದ್ದಾರೆ. ಒಂದು ವರ್ಷ ಕಳೆದರೂ ಬಡ್ಡಿ ನೀಡಿರುವುದಿಲ್ಲ, ಅನೇಕ ಬಾರಿ ಕೇಳಿದರೂ ಹಣ ನೀಡದಿದ್ದಾಗ ಸಾಲ ನೀಡಿದವರ ಕಡೆಯ 15 ಜನರ ತಂಡ ಜೂ.11ರ ಬೆಳಗ್ಗೆ 11 ಗಂಟೆಗೆ ಬಂದು ಸಿಸಿ ಕ್ಯಾಮೆರಾಗಳನ್ನು ಒಡೆದಿದೆ. ವಿದ್ಯಾರ್ಥಿಗಳಿಗೆ ಮನೆಗೆ ಹೋಗುವಂತೆ ಸೂಚಿಸಿದೆ. ಇದನ್ನು ವಿದ್ಯಾರ್ಥಿಗಳು ಪ್ರಶ್ನಿಸಿದಾಗ, ಸಾಲದ ಹಣ ಮತ್ತು ಬಡ್ಡಿ ನೀಡುವವರೆಗೂ ಕಾಲೇಜು ಪ್ರಾರಂಭವಾಗುವುದಿಲ್ಲ ಎಂಬ ಉತ್ತರ ಬಂದಿದೆ. ನಂತರ ಪ್ರತಿದಿನ ವಿದ್ಯಾರ್ಥಿಗಳು ಮತ್ತು ಪ್ರಾಚಾರ್ಯರು ಕೊಠಡಿಯ ಬೀಗ ಒಡೆದು ತರಗತಿ ನಡೆಸುವುದು, ಸಾಲ ನೀಡಿದವರು ಬಂದು ಬೀಗ ಹಾಕುವುದು ನಡೆಯುತ್ತಿದೆ.
ವಿದ್ಯಾರ್ಥಿಗಳ ಗತಿ ಏನು?
ಪ್ರತಿಭಟನೆ ವೇಳೆ ಮಾತನಾಡಿದ ವಿದ್ಯಾರ್ಥಿನಿ ಸುಮಾ, ಕಾಲೇಜಿನಲ್ಲಿ 120 ವಿದ್ಯಾರ್ಥಿಗಳು ಹೆಲ್ತ್ ಇನ್ಸ್ಸ್ಪೆಕ್ಷನ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇವೆ. 20 ವರ್ಷದಿಂದ ಉತ್ತಮವಾಗಿ ಕಾಲೇಜು ನಡೆಯುತ್ತಿದೆ ಎಂದು ಪಾಲಕರು ಕಾಲೇಜಿಗೆೆ ದಾಖಲಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಹಾಗೂ ಹಣಕಾಸು ವ್ಯವಹಾರ ಮಾಡುವವವರು ಕಾಲೇಜಿನಿಂದ ಹೊರಗೆ ವ್ಯವಹಾರ ಮಾಡಿಕೊಳ್ಳಬೇಕು. ಬದಲಿಗೆ ಕಾಲೇಜಿಗೆ ಬಂದು ವಿದ್ಯಾರ್ಥಿಗಳನ್ನು ಹೊರಹಾಕುವುದು ಸರಿಯಲ್ಲ ಎಂದರು.
ನಮ್ಮ ಭವಿಷ್ಯ ಶಿಕ್ಷಣದ ಮೇಲೆ ನಿಂತಿದೆ, ಕಳೆದ ಹತ್ತು ದಿನಗಳಿಂದ ಕಾಲೇಜಿನ ವಾತಾವರಣ ಕೆಟ್ಟು ಹೋಗಿದೆ, ಕಲಿಯಲು ಆಗುತ್ತಿಲ್ಲ. ಪ್ರತಿದಿನ ಬಂದು ಬೀಗ ಹಾಕಿರುವುದನ್ನು ನೋಡಿಕೊಂಡು ಹೋಗುವುದಾಗಿದೆ. ಇದರಿಂದ ವಿದ್ಯಾರ್ಥಿಗಳ ಗತಿಏನು? ಮೊದಲು ಕಾಲೇಜು ಪ್ರಾರಂಭ ಮಾಡಬೇಕು. ಇಲ್ಲದಿದ್ದರೆ ನಿರಂತರವಾಗಿ ವಿದ್ಯಾಸಂಸ್ಥೆ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಪ್ರಾಚಾರ್ಯು ರೂಪಾ ಮೂಲೆಮನೆ ಮಾತನಾಡಿ, ಕಾಲೇಜಿನ ಅಭಿವೃದ್ಧಿಗಾಗಿ ಸಾಲ ಪಡೆದಿದ್ದೇನೆ. ಅವರ ಹಣವನ್ನು ವಾಪಸ್ ನೀಡಲು ಒಂದು ತಿಂಗಳ ಸಮಯವನ್ನು ಕೇಳಿದರೂ ಪದೇ ಪದೆ ಬಂದು ಬೀಗ ಹಾಕಿ, ಹಣ ನೀಡಿದ ಮೇಲೆ ಕಾಲೇಜು ನಡೆಸಿ ಎಂದು ಹೇಳುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಗೀತಾ, ಮಮತಾ, ಕವಿತಾ, ಸಂದೀಪ್, ಪ್ರಜ್ವಲ್, ಪಂಕಜ್, ಮಹ್ಮದ್ ಶಾಹಿದ್, ಮಹ್ಮದ್ ಅರ್ಬಾಜ್ ಇತರರು ಇದ್ದರು. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.