ಜಿಲ್ಲೆ

ಉತ್ತುಂಗಕ್ಕೇರಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ

ಮರಿದೇವ ಹೂಗಾರ

ಹುಬ್ಬಳ್ಳಿ: ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸಿದರೆ ವಿದ್ಯಾರ್ಥಿಗಳು ಉನ್ನತ ಸ್ಥಾನ ತಲುಪಲು ಸಾಧ್ಯವಾಗಲಿದೆ. ಆಯ್ಕೆ ಅವರಿಗೆ ಬಿಟ್ಟಾಗ ಆಯಾ ಕ್ಷೇತ್ರದಲ್ಲಿ ಹೆಚ್ಚು ಪ್ರಗತಿಯಾಗಲಿದೆ ಎಂದು ಮಜೇಥಿಯಾ ಫೌಂಡೇಷನ್ ಚೇರ್ಮನ್, ಕರ್ನಾಟಕ ಸರ್ಕಾರದ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕೃತ ಜಿತೇಂದ್ರ ಮಜೇಥಿಯಾ ಅವರು ಅಭಿಪ್ರಾಯಪಟ್ಟರು.

ಮಕ್ಕಳ ದಿನಾಚರಣೆ ನಿಮಿತ್ತ ಮಜೇಥಿಯಾ ಫೌಂಡೇಷನ್ ವತಿಯಿಂದ ಇಲ್ಲಿಯ ಗೋಕುಲ ಗ್ರಾಮದ ಶ್ರೀಗುರು ಗೋರಕ್ಷನಾಥ ಕನ್ನಡ ಪ್ರಾಥಮಿಕ ಪ್ರೌಡ ಶಾಲೆಯ ಸಭಾ ಗೃಹದಲ್ಲಿ 450 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಸಿಹಿ ವಿತರಿಸಿ ಅವರು ಮಾತನಾಡಿದರು.

ಅನೇಕ ಶಿಕ್ಷಣ ಸಂಸ್ಥೆಗಳು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಸಿರಿವಂತರು ಕೈಜೋಡಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಹೂಗಾರ ಮಾತನಾಡಿ, ದಾನಿಗಳ ಸಹಕಾರದಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಏಳ್ಗೆಗೆ ದಾನಿಗಳು ಆರ್ಥಿಕ ಸೇರಿ ಇತರ ಸಹಾಯ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.

ಡಿಪಿ ಮಧೂರಕರ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಶಿವಾಜಿ ಮಧೂರಕರ ಅಧ್ಯಕ್ಷತೆ ವಹಿಸಿ ಮಾತನಾಡಿ, 42 ವರ್ಷಗಳಿಂದ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ನಮ್ಮ ಸಂಸ್ಥೆ ಶ್ರಮಿಸುತ್ತಿದೆ. ಪಾಠದ ಜತೆಗೆ ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಕೆಲಸ ಮಾಡಲಾಗುತ್ತಿದೆ ಎಂದರು.

ಉದ್ಯಮಿಗಳಾದ ಪ್ರಕಾಶ ಸರಾಫ, ಸಂಜು ಮೋನೆ, ರಮೇಶ ಮಧೂರಕರ, ಮಜೇಥಿಯಾ ಫೌಂಡೇಷನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 450 ವಿದ್ಯಾರ್ಥಿಗಳಿಗೆ ಪ್ಯಾಂಟ್, ಶರ್ಟ್, ಟೋಪಿ, ಸಾಕ್ಸ್ ಹಾಗೂ ಸಿಹಿ ವಿತರಿಸಲಾಯಿತು.

ಕೆ.ಎನ್. ಕಾತೇನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಬಿ. ಹುಲ್ಯಾಳ ಸ್ವಾಗತಿಸಿದರು. ವಿ.ಪಿ. ಜೋಗಾರ ನಿರೂಪಿಸಿದರು. ಬಿ.ಎಸ್. ಹಿರೇಮಠ ವಂದಿಸಿದರು.

ಮಜೇಥಿಯಾ ಫೌಂಡೇಷನ್ ಸಿಇಒ ಡಾ. ಸುನೀಲ ಕುಕನೂರ, ಬಾಲಕೃಷ್ಣ ಸರಾಫ, ರೋಹನ ಗೊಂದಕರ ಉಪಸ್ಥಿತರಿದ್ದರು.