ಜಿಲ್ಲೆ

ವಿದ್ಯಾರ್ಥಿಗಳಿಗೆ ಶ್ರದ್ಧೆ, ಶಿಸ್ತು, ಗುರಿ ಅವಶ್ಯ

ಕಿರಣ್ ಗೌಡ.ಜಿ

ಪಾಂಡವಪುರ: ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ಧೆ, ಶಿಸ್ತು ಹಾಗೂ ಉತ್ತಮ ಗುರಿ ಹೊಂದುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಕಾಶ್‌ಮೇನಾಗರ ಅವರ ‘ಕವಿಕಾವ್ಯ ಡಿಂಡಿಮ’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಜೀವನದಲ್ಲಿ ಕಷ್ಟಪಟ್ಟು ಓದಿದರೆ ಮಾತ್ರ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ, ಕಷ್ಟಪಟ್ಟು ಓದಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿರುವ ಕಾರಣಕ್ಕೆ ಮಕ್ಕಳಿಗೆ ಕಸಾಪ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಶ್ರಮಪಟ್ಟು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ಜೀವನದ ಸರಿದಾರಿಯನ್ನು ನಾವೇ ಗುರುತಿಸಿಕೊಳ್ಳಬೇಕು, ಓದಿನ ವಿಚಾರದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಬಾರದು, ಓದಿನಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಧ್ಯಯನ ನಡೆಸಬೇಕೇ ಹೊರತು ನಾವೇ ತಂತ್ರಜ್ಞಾನಗಳಾಗಬಾರದು. ಪರಿಸರವನ್ನು ಸಂರಕ್ಷಣೆ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಕೈಜೋಡಿಸಬೇಕು. ಸರ್ಕಾರ ಶಾಲೆಗಳ ಉಳಿವಿಗಾಗಿ ಮುಂದಿನ ಪೀಳಿಗೆಯ ಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ತಹಸೀಲ್ದಾರ್ ಸಂತೋಷ್‌ಕುಮಾರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಂಡ್ಯ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಅಪಾರವಾಗಿದೆ. ಮೈಸೂರು ವಿವಿ, ಮೈಸೂರು ಬ್ಯಾಂಕ್, ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣ, ವಿದ್ಯುತ್ ಉತ್ಪಾದನ ಕೇಂದ್ರ ಸ್ಥಾಪನೆ, ಕೆರೆಕಟ್ಟೆಗಳ ನಿರ್ಮಾಣ ಸೇರಿದಂತೆ ಅನೇಕ ಪುಣ್ಯದ ಕೆಲಸಗಳನ್ನು ಮಾಡಿ ಜನರ ನೆಮ್ಮದಿಯ ಬದುಕಿಗೆ ಕಾರಣರಾಗಿದ್ದಾರೆ. ಇಂತಹ ಪುಣ್ಯಾತ್ಮರನ್ನು ಜಿಲ್ಲೆಯ ಜನತೆ ಪ್ರತಿದಿನ ಸ್ಮರಿಸಬೇಕು ಎಂದು ಬಣ್ಣಿಸಿದರು.

ನಾಲ್ವಡಿ ಪ್ರಶಸ್ತಿ ಸ್ವೀಕರಿಸಿ ಗಾನಸುಮ ಕೆ.ಪರಮೇಶ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇತಿಹಾಸ, ಸಾಧನೆಯನ್ನು ಮುಚ್ಚುವ ಕೆಲಸವಾಗುತ್ತಿದೆ. ಜಿಲ್ಲೆಯ ಜನತೆ ಪ್ರತಿನಿತ್ಯ ನಾಲ್ವಡಿ ಅವರನ್ನು ನೆನೆದು ಸ್ಮರಿಸಬೇಕು, ನಾಲ್ವಡಿ ಸಮಾಧಿಗೆ ವರ್ಷಕ್ಕೊಮ್ಮೆ ಮಾತ್ರ ಪೂಜೆ ಸಲ್ಲಿಸುತ್ತಿರುವುದು ಬೇಸರದ ಸಂಗತಿ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಆಗಮಿಸಿ ಪ್ರಕಾಶ್ ಮೇನಾಗರ ಅವರ ‘ಕವಿಕಾವ್ಯ ಡಿಂಡಿಮ’ ಕೃತಿ ಬಿಡುಗಡೆಗೊಳಿಸಿ ತುರ್ತು ಕಾರ್ಯಕ್ರಮ ನಿಮಿತ್ತ ತೆರಳಿದರು.

2024-25 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ 74 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಗಾನಸುಮ ಕೆ.ಪರಮೇಶ್ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಲಾಯಿತು.

ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ಮುತ್ತಿಗೆರೆ ಮಂಜು, ಟಿ.ಪಿ.ರೇವಣ್ಣ, ಕನಗನಮರಡಿ ಕೃಷಿ ಪತ್ತಿನ ಸಹಕಾರದ ಅಧ್ಯಕ್ಷ ಎಚ್.ಜೆ.ರಾಮಕೃಷ್ಣ, ಕಸಾಪ ಪದಾಧಿಕಾರಿಗಳಾದ ಧರ್ಮರತ್ನಾಕರ, ಧನಂಜಯ್, ಉದ್ಯಮಿ ಶಿವಕುಮಾರ್, ಜ್ಞಾನೇಶ್‌ನರಹಳ್ಳಿ, ವೆಂಕಟೇಶ್, ಬಾಲಕೃಷ್ಣ, ಶಿವರಾಜು, ಶ್ರೀನಿವಾಸ್ ಹಾಜರಿದ್ದರು.