ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್ ಶಿವರುದ್ರ, ರವೀಂದ್ರ ಪಾಲ್ಗೊಂಡಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಿ

ಶಿವಶಂಕರ್ ಎಂ. ಹೆಬ್ಬಳ್ಳ

ವಿರಾಜಪೇಟೆ : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಜೀವವನ್ನು ಉಳಿಸಿಕೊಳ್ಳುವಂತಾಗಬೇಕು ಎಂದು ವಿರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್ ಹೇಳಿದರು.
ಪಟ್ಟಣದ ಸಂತ ಅನ್ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸ್ತೆ ಸಂಚಾರ ನಿಯಮ, ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾಹನ ಚಾಲನೆ ಮಾಡುವ ಸಂದರ್ಭ ಚಾಲಕರು ಮೊಬೈಲ್ ಬಳಸಬಾರದು, ಇದರಿಂದ ವಾಹನವನ್ನು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗದೆ ಅನೇಕ ಅಪಘಾತಗಳು ನಡೆಯುತ್ತಿವೆ. ಅಪಘಾತಗಳಿಂದ ಅನೇಕ ಜೀವಗಳನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರ ಮಾತನಾಡಿ, ವಾಹನಗಳ ಚಾಲನೆ ಸಂದರ್ಭ ವಾಹನದ ದಾಖಲೆಗಳು ಕಡ್ಡಾಯವಾಗಿರಬೇಕು. ನಾಲ್ಕು ಚಕ್ರದ ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಬಳಸುವುದು ಮುಖ್ಯ. ಅತೀವೇಗದ ಚಾಲನೆ ಮಾಡುವುದರಿಂದ ರಸ್ತೆಯಲ್ಲಿ ಗುಂಡಿಗಳು, ಎದುರಿನಿಂದ ಬರುವ ವಾಹನ, ಮಂಜು ಕವಿದ ವಾತಾವರಣ ಇತ್ಯಾದಿ ಕಾರಣಗಳಿಂದ ಅಪಘಾತಗಳು ಸಂಭವಿಸಬಹುದು. ಆದ್ದರಿಂದ ಚಾಲಕರು ವೇಗದ ಮಿತಿಯಲ್ಲಿ ಚಾಲನೆ ಮಾಡುವುದು ಒಳಿತು ಎಂದು ಸಲಹೆ ನೀಡಿದರು.