ಜಿಲ್ಲೆ

ವಿದ್ಯಾರ್ಥಿಗಳು ಕಲಿಕಾ ಮನೋಭಾವ ಹೊಂದಲಿ

ಧರ್ಮರಾಜ ರಾಮನಗೌಡ ಪಾಟೀಲ

ಬೆಳಗಾವಿ: ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಕಲಿಕಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬ್ಯಾಂಕ್ ಆಫ್ ಇಂಡಿಯಾ, ಬೆಳಗಾವಿ ವಲಯದ ಸಹಾಯಕ ಮಹಾಪ್ರಬಂಧಕ ಅರುಣಕುಮಾರ ಝಾ ಹೇಳಿದರು.

20 ರಾಷ್ಟ್ರಗಳ ಸಮ್ಮಿಲನದ ಅಧ್ಯಕ್ಷತೆಯನ್ನು ಭಾರತ ವಹಿಸಿದ್ದು, ಇದರ ಸ್ಮರಣೆಯಲ್ಲಿ ನಗರದ ಭರತೇಶ ಎಂಬಿಎ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಆಂತರ್ ಕಾಲೇಜು ವ್ಯವಸ್ಥಾಪನಾ ಮೇಳ-2023 ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಮ್ಯಾನೇಜ್‌ಮೆಂಟ್ ಅಧ್ಯಯನ ಮುಂದುವರಿಸಬೇಕು ಎಂದು ಪ್ರೇರೇಪಿಸಿದರು.

ಭರತೇಶ ಶೀಕ್ಷಣ ಸಂಸ್ಥೆ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪುರೆ, ಜೈನ್ ಇಂಜಿನಿಯರ್ಸ್ ಲಿಮಿಟೆಡ್ ಮುಖ್ಯ ಮಾರುಕಟ್ಟೆ ಅಧಿಕಾರಿ ಅನುಪಮಾ ಶಿರಹಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಮಹಾವೀರ ಉಪಾಧ್ಯೆ ಇದ್ದರು.

ಬೆಳಗಾವಿ ಜಿಲ್ಲೆಯ ವಿವಿಧ ಯುಜಿ ಸಂಸ್ಥೆಗಳ ಟೀಮ್‌ಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮಕ್ಕೆ ಬ್ಯಾಂಕ್ ಆಫ್ ಇಂಡಿಯಾ, ಮಹಾವೀರ್ ಸಹಕಾರಿ ಬ್ಯಾಂಕ್, ಎಡಿಎಂಎಸ್ ಇ-ಬೈಕ್, ಚಂದ್ರಪ್ರಭ ಆಫ್‌ಸೆಟ್ ಪ್ರಿಂಟರ್ಸ್ ಮತ್ತು ಕ್ರೀಸ್‌ವೈಸ್ ಟೇಲರ್‌ಗಳು ಪ್ರಮುಖ ಪ್ರಾಯೋಜಕರಾಗಿದ್ದರು. ಭರತೇಶ ಎಂ.ಬಿ.ಎ. ಕಾಲೇಜಿನ ನಿರ್ದೇಶಕ ಡಾ. ಪ್ರಸಾದ್ ದಡ್ಡಿಕರ್ ಅತಿಥಿಗಳನ್ನು ಸ್ವಾಗತಿಸಿದರು.

ಡಾ. ಪದ್ಮಪ್ರಿಯಾ ಕತಗಲ ಮತ್ತು ಪ್ರೊ.ರಂಜನಾ ಚೌಗುಲೆ ನಿರೂಪಿಸಿದರು. ಮೇಳದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಅವರ ನಿರ್ವಹಣಾ ಕೌಶಲ, ಸೃಜನಶೀಲತೆ ಮತ್ತು ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಯಿತು.