ಮಡಿಕೇರಿ: ರಾಷ್ಟ್ರವು ಸ್ವಾತಂತ್ರ್ಯ ಪಡೆದು ೭೫ ವರ್ಷ ಪೂರ್ಣಗೊಂಡ ಹಿನ್ನೆಲೆ ದೇಶದ ಸಮಗ್ರ ಅಭಿವೃದ್ಧಿ ಮತ್ತು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಕುರಿತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ಜಿಲ್ಲೆಯ ಆಯ್ದ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೇಂಜರ್ಸ್ ರೋವರ್ಸ್ ವಿದ್ಯಾರ್ಥಿಗಳೊಂದಿಗೆ ಗುರುವಾರ ಸಂವಾದ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂವಾದದಲ್ಲಿ ವಿಶೇಷ ವಿಕಲಚೇತನ ವಿದ್ಯಾರ್ಥಿ ಆಸೀಫ್ ದೇಶಭಕ್ತಿ ಗೀತೆ ಹಾಡಿ ಎಲ್ಲರ ಗಮನಸೆಳೆದರು. ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಜಿಲ್ಲೆ ನಮ್ಮದಾಗಿದ್ದು ಸ್ವಾತಂತ್ರ್ಯದ ಬಳಿಕ ಜಿಲ್ಲೆಯೂ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೂ ಕೊಡಗು ಜಿಲ್ಲೆಯಲ್ಲಿ ವಿಕಲಚೇತನರಿಗೆ ಹಾಗೂ ದೃಷ್ಟಿ ಹೀನ ಮಕ್ಕಳಿಗೆ ಇನ್ನೂ ಕೂಡ ಒಂದು ವಿಶೇಷ ಶಾಲೆ ಇಲ್ಲ ಎಂದು ಗಮನ ಸೆಳೆದರು.
ವಿದ್ಯಾರ್ಥಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಸ್ವಯಂ ಪ್ರೇರಿತವಾಗಿ ಸಂಸ್ಥೆಗಳು ಮುಂದೆ ಬಂದರೆ ಸರ್ಕಾರದ ವತಿಯಿಂದ ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು.
ದೇಶ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಇಲ್ಲಿನ ವಾತಾವರಣ ಪರಿಸರ ವ್ಯವಸ್ಥೆಯು ಪ್ರವಾಸಿಗರನ್ನು ಆಕರ್ಷಿಸುತಿದ್ದರೂ ಕೂಡ ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದೆ. ಆದ್ದರಿಂದ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸಲಹೆ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಸರ್ಕಾರ ಯಾವ ರೀತಿಯ ಪ್ಲಾಸ್ಟಿಕ್‌ನ್ನು ನಿಷೇಧ ಮಾಡಬೇಕು ಎಂಬ ಬಗ್ಗೆ ಈಗಾಗಲೇ ಆದೇಶ ಹೊರಡಿಸಿದೆ ಎಂದರು.
ವಿದ್ಯಾರ್ಥಿ ನಿಶ್ಚಿತ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಶಾಲೆಗೆ ಹೋಗಿ ಬರಲು ಕಷ್ಟವಾಗಲಿದೆ. ಆದ್ದರಿಂದ ಬಸ್ ಸಂಪರ್ಕ ಕಲ್ಪಿಸುವಂತಾಗಬೇಕು ಎಂದು ಗಮನಕ್ಕೆ ತಂದರು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರ ಜತೆ ಚರ್ಚಿಸಿ ಅಗತ್ಯವಿರುವ ಕಡೆಗಳಲ್ಲಿ ಬಸ್ ಕಲ್ಪಿಸಲಾಗುವುದು. ಜತೆಗೆ ಬಸ್ ಸಂಚಾರ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಜತೆ ಇಂತಿಷ್ಟು ಜನರಾದರೂ ಸಂಚಾರ ಮಾಡಬೇಕು ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಹತ್ತಾರು ಕಿ.ಮೀ. ನಡೆದು ಶಾಲೆಗೆ ಹೋಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ವಾಹನದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದು, ನಡೆಯುವುದು ಕಡಿಮೆಯಾಗಿದೆ. ಮಕ್ಕಳು ಮೈದಾನದಲ್ಲಿ ಆಟವಾಡುವುದು ಕಡಿಮೆಯಾಗಿದ್ದು, ಮೊಬೈಲ್‌ನಲ್ಲಿ ಆಟ ಆಡುವುದು ಹೆಚ್ಚಾಗಿದೆ ಎಂದರು.
ಕೆಲವೊಂದು ಉತ್ಪನ್ನಗಳು ಹಾಗೂ ಕಚ್ಚಾ ತೈಲಗಳಿಗಾಗಿ ಇತರ ದೇಶಗಳನ್ನು ಅವಲಂಬಿತರಾಗುವುದು ಅನಿವಾರ್ಯ ಹಾಗೂ ಉದ್ಯೋಗ, ತಂತ್ರಜ್ಞಾನ ಮತ್ತಿತರ ಕೆಲವೊಂದು ವಿಷಯಗಳಿಗೆ ಅವಲಂಬಿತವಾಗುವುದು ಅನಿವಾರ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಕೂಡ ಬದಲಾವಣೆ ಅನಿವಾರ್ಯ. ಆಧುನಿಕ ಯುಗದಲ್ಲಿ ಹೊಸತನಕ್ಕೆ ಪ್ರತಿಯೊಬ್ಬರೂ ಅವಲಂಬಿತರಾಗಿದ್ದಾರೆ. ಆ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಮನೆಗಳಿಗೆ ಪೈಪ್ ಲೈನ್ ಮೂಲಕ ಗ್ಯಾಸ್ ವಿತರಿಸುವ ಯೋಜನೆ ಜಿಲ್ಲೆಯಲ್ಲಿ ಬರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯೂ, ಭಾರತ ಸ್ಕೌಟ್ಸ್ ಮತ್ತು ಗೈಟ್ಸ್‌ನ ಜಿಲ್ಲಾ ಸಂಘಟಕಿ ದಮಯಂತಿ, ಮಡಿಕೇರಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಬಿ.ಎನ್.ರಮೇಶ್, ಉಪಾಧ್ಯಕ್ಷ ಬೊಳ್ಳಿಜಿರ ಬಿ.ಅಯ್ಯಪ್ಪ, ಧನಂಜಯ, ಜಿಲ್ಲಾ ತರಬೇತಿ ಆಯುಕ್ತ ಮೈಥಿಲಿ, ಶಿಕ್ಷಕರು ಹಾಗೂ ಪ್ರಮುಖರು ಇದ್ದರು.