ಬಸವಕಲ್ಯಾಣ: ವಿದ್ಯಾರ್ಥಿಗಳು ಪದವಿ ಪಡೆದು ಸರ್ಕಾರಿ ಅಥವಾ ಖಾಸಗಿ ಉದ್ಯೋಗಕ್ಕಾಗಿ ಅಲೆದಾಡದೆ ಸ್ವಾವಲಂಬಿ ಬದುಕಿಗಾಗಿ ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡು ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ಯಮಿದಾರರಾಗಬೇಕು ಎಂದು ಬೀದರ್ ವಾಣಿಜ್ಯ ತೆರೆಗೆಯ ಸಹಾಯಕ ಆಯುಕ್ತ ಡಾ. ಮಹೇಶ್ ಪಾಟೀಲ್ ಸಲಹೆ ನೀಡಿದರು.
ನಗರದ ಪುಣ್ಯಕೋಟಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗುಟಕಾ, ತಂಬಾಕು ಸೇರಿ ಇತರ ದುಶ್ಚಟಗಳಿಗೆ ಆಕರ್ಷಿತರಾಗದೆ ಆರೋಗ್ಯ ಕಾಪಾಡಿಕೊಳ್ಳಬೇಕು. ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಜ್ಞಾನ ವೃದ್ಧಿಯ ಜತೆಗೆ ಆತ್ಮವಿಶ್ವಾಸ ಮತ್ತು ಸಾಮಾಜಿಕ ಬದ್ಧತೆ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಸೂರ್ಯಕಾಂತ ಶೀಲವಂತ ಮಾತನಾಡಿ, ಸರ್ಕಾರಿ ಉದ್ಯೋಗ ಪಡೆಯಲು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ಸಾಲದು. ಸ್ವರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಹೀಗಾಗಿ ನಿರಂತರ ಅಧ್ಯಯನ, ಕಠಿಣ ಪರಿಶ್ರಮ ಬೇಕಾಗುತ್ತದೆ ಎಂದು ಹೇಳಿದರು.
ಸಂಸ್ಥೆ ಕೋಶಾಧ್ಯಕ್ಷ ಶಶಿಕಾಂತ ಶೀಲವಂತ, ಸುರೇಖಾ ಶೀಲವಂತ ಮಾತನಾಡಿದರು. ಉಪನ್ಯಾಸಕರಾದ ಅಶೋಕ ಪೋತೆ, ಪ್ರಫುಲ್‌ಕುಮಾರ, ಮಹಾದೇವಿ ದಾಸೂರೆ, ಸಪ್ನಾ ಮಲ್ಲಿಕಾರ್ಜುನ ಇತರರಿದ್ದರು.
ಪ್ರತಿಭಾ ಬಸವರಾಜ ನಿರೂಪಣೆ ಮಾಡಿದರು. ಮಾಲಾಶ್ರೀ ದಶರತ ವಂದಿಸಿದರು. ಮಾಯಾದೇವಿ ಸುಖದೇವ, ಅಶ್ವಿನಕುಮಾರ ಹಾಗೂ ಅಂಕಿತಾ ಮತ್ತಿತರರು ಕವನ ವಾಚನ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ನಡೆಸಿಕೊಟ್ಟರು.
ಬೆಳ್ಳಿ ಪದಕ: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ೬೦೦ಕ್ಕೆ ೫೭೭ ಅಂಕ ಪಡೆದ ಮಂಜುಳಾ ಗುಂಡಪ್ಪ ಮತ್ತು ವಾಣಿಜ್ಯ ವಿಭಾಗದಲ್ಲಿ ೬೦೦ಕ್ಕೆ ೫೭೦ ಅಂಕ ಪಡೆದ ಸಾಗರ್ ಸೀತಾರಾಮ ಅವರಿಗೆ ಸಂಸ್ಥೆಯಿಂದ ಬೆಳ್ಳಿ ಪದಕ ನೀಡಿ ಜತೆಗೆ ಇವರ ತಂದೆ-ತಾಯಿ ಅವರನ್ನು ಸನ್ಮಾನಿಸಲಾಯಿತು. ಟಾಪ್ ಟೆನ್ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಮಾಡಲಾಯಿತು.