ಸಂಗ್ರಹ ಚಿತ್ರ  
ಜಿಲ್ಲೆ

ಶಾಲೆ ಕಡೆಗೆ ಮುಖ ಮಾಡಲಿರುವ ವಿದ್ಯಾರ್ಥಿಗಳು

ಅವಿನಾಶ್ ಜೈನಹಳ್ಳಿ

ಬೇಸಿಗೆ ರಜೆ ಗುಂಗಿನಲ್ಲಿದ್ದ ಚಿಣ್ಣರು ಮತ್ತೆ ಶಾಲೆ ಕಡೆಗೆ ಮುಖ ಮಾಡುವ ಸಮಯ ಬಂದಿದ್ದು, ಬುಧವಾರದಿಂದ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳ ಕಲರವ ಮೇಳೈಸಲಿದೆ. ಶಾಲೆಗಳ ಪ್ರಾರಂಭೋತ್ಸವದ ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಕಳೆದ ಬಾರಿ ಸಮವಸ್ತ್ರ ವಿತರಣೆಯಲ್ಲಿ ವಿಳಂಬವಾಗಿತ್ತು. ಪಠ್ಯಪುಸ್ತಕಗಳನ್ನು ಸರಿಯಾದ ಸಮಯಕ್ಕೆ ವಿತರಿಸಿರಲಿಲ್ಲ. ಇದರಿಂದ ಶಾಲೆ ಶುರುವಾದ 6 ತಿಂಗಳವರೆಗೆ ಮಕ್ಕಳು ಹಳೇ ಸಮವಸ್ತ್ರವನ್ನೇ ಧರಿಸಿಕೊಂಡು ತರಗತಿಗೆ ಹೋಗುತ್ತಿದ್ದರು. ಆದರೆ, ಈ ಬಾರಿ ಶಾಲೆ ಪ್ರಾರಂಭದ ಮೊದಲ ದಿನವೇ ಸಮವಸ್ತ್ರ ವಿತರಿಸಲು ಇಲಾಖೆ ಕ್ರಮ ಕೈಗೊಂಡಿದೆ.

ಪಠ್ಯಪುಸ್ತಕ ವಿತರಣೆ

ಕಳೆದ ಬಾರಿ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪಠ್ಯಪುಸ್ತಕ ವಿತರಣೆ ಆಗಿರಲಿಲ್ಲ. ಇದರಿಂದ ಶೈಕ್ಷಣಿಕ ಚಟುವಟಿಕೆಗೆ ತೊಂದರೆ ಆಗಿತ್ತು. ಕೆಲವು ವಿಷಯಗಳ ಪಠ್ಯಪುಸ್ತಕ ಮೂರು ತಿಂಗಳ ನಂತರ ಮಕ್ಕಳ ಕೈ ಸೇರಿತ್ತು. ಹಾಗಾಗಿ ಕಿರುಪರೀಕ್ಷೆ ಎದುರಿಸಲು ಮಕ್ಕಳಿಗೆ ಕಷ್ಟವಾಗಿತ್ತು. ಆದರೆ, ಈ ಬಾರಿ ಯಾವುದೇ ಸಮಸ್ಯೆ ಸೃಷ್ಟಿಯಾಗಬಾರದು ಎಂಬ ಉದ್ದೆಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಗೆ 15,85,953 ಪಠ್ಯ ಪುಸ್ತಕಗಳು ಈಗಾಗಲೇ ಮುದ್ರಣವಾಗಿ ಬಂದಿವೆ. ಜತೆಗೆ ಖಾಸಗಿ ಶಾಲೆಗಳಿಗೆ ಮಾರಾಟ ಮಾಡಲು 9,82,203 ಪುಸ್ತಕಗಳು ಸಿದ್ಧವಾಗಿವೆ.

ಯಾವ ತಾಲೂಕಿಗೆ ಎಷ್ಟು?

ಎಚ್.ಡಿ.ಕೋಟೆಗೆ 1,81,027, ಹುಣಸೂರಿಗೆ 1,87,270, ಕೆ.ಆರ್.ನಗರಕ್ಕೆ 1,43,118, ಮೈಸೂರು ಉತ್ತರಕ್ಕೆ 1,85,566, ಮೈಸೂರು ಗ್ರಾಮಾಂತರದಲ್ಲಿ 2,11,942, ಮೈಸೂರು ದಕ್ಷಿಣಕ್ಕೆ 1,22,468, ನಂಜನಗೂಡಿಗೆ 2,37,764, ಪಿರಿಯಾಪಟ್ಟಣಕ್ಕೆ 1,47,814 ಹಾಗೂ ತಿ.ನರಸೀಪುರಕ್ಕೆ 1,68,984 ಪುಸ್ತಕಗಳು ಸೇರಿದಂತೆ ಒಟ್ಟು 15,85,953 ಪಠ್ಯಪುಸ್ತಕಗಳು ಸಿದ್ಧಗೊಂಡಿದೆ.

ಮಕ್ಕಳ ಸ್ವಾಗತಕ್ಕೆ ಸಿದ್ಧತೆ

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿ ಒಟ್ಟು 3,446 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಪ್ರಸಕ್ತ ಶೈಕ್ಷಣಿಕ ಸಾಲನ್ನು ‘ಗುಣಾತ್ಮಕ ಶೈಕ್ಷಣಿಕ ವರ್ಷ’ ಎಂದು ಘೋಷಣೆ ಮಾಡಲಾಗಿದ್ದು, ಮೊದಲ ದಿನ ಸ್ಥಳೀಯ ಜನಪ್ರತಿನಿಧಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸಿ ಮೆರವಣಿಗೆ ಮೂಲಕ ಮಕ್ಕಳನ್ನು ಕರೆತಂದು, ಹೂ, ಸಿಹಿ ನೀಡುವ ಮೂಲಕ ಆತ್ಮಿಯವಾಗಿ ಸ್ವಾಗತಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಮಕ್ಕಳಿಗೆ ವಾರದೊಳಗೆ ಒಂದು ಜೊತೆ ಶೂ ವಿತರಣೆ ಮಾಡಲು ಇಲಾಖೆ ತೀರ್ಮಾನಿಸಿದೆ. ಅಕ್ಷರ ದಾಸೋಹದ ಕೊಠಡಿ, ಪಾತ್ರೆಗಳು, ನೀರಿನ ಟ್ಯಾಂಕ್, ಸಂಪು, ದವಸ-ಧಾನ್ಯಗಳನ್ನು ಪರಿಶೀಲಿಸಿ ಸ್ವಚ್ಛಗೊಳಿಸಬೇಕು. ಶಾಲಾ ಆರಂಭದ ದಿನ ಮಧ್ಯಾಹ್ನ ಊಟದ ಜತೆಗೆ ಸಿಹಿ ನೀಡಬೇಕು ಎಂದು ಸುತ್ತೊಲೆಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಒಳಗೊಂಡಂತೆ ಶಿಕ್ಷಕರು ಶಾಲೆಗೆ ತಳಿರು ತೋರಣ ಕಟ್ಟಿ, ಡೋಲು, ನಗಾರಿ, ಎತ್ತಿನ ಗಾಡಿ ಮೂಲಕ ಮಕ್ಕಳನ್ನು ಕರೆತರಲಿದ್ದಾರೆ. ಗುಲಾಬಿ, ನೀಡಿ, ಸ್ವಾಗತಿಸಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲೆಯ ಎಲ್ಲ ಭಾಗದ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಹಾಜರಾಗಿ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಸರ್ಕಾರ, ಇಲಾಖೆ ನೀಡಿರುವ ಸುರಕ್ಷತಾ ಕ್ರಮಗಳ ಪಾಲನೆಗಳನ್ನು ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ನಿರ್ವಹಿಸಲು ತಿಳಿಸಲಾಗಿದೆ.

ದಾಖಲಾತಿಗೆ ವಿಶೇಷ ಆಂದೋಲನ

ಸಾಮಾನ್ಯವಾಗಿ ಯಾವುದೇ ಮಕ್ಕಳು ಶಾಲೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರು ದಾಖಲಾತಿಗೆ ವಿಶೇಷ ಆಂದೋಲನ ಮಾಡಲು ನಿರ್ಧರಿಸಿದ್ದಾರೆ. ಮಕ್ಕಳೊಂದಿಗೆ ಶಿಕ್ಷಕರು ಪ್ರತಿ ಮನೆಗೆ ಭೇಟಿ ನೀಡಿ ‘ನಿಮ್ಮ ಮನೆಯಲ್ಲಿ ಶಾಲೆಗೆ ಹೋಗದ ಮಕ್ಕಳಿದ್ದರೆ ಕಳುಹಿಸಿ ಕೊಡಿ’ ಎಂದು ಮನವಿ ಮಾಡುತ್ತಾರೆ. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಕರಪತ್ರ, ಬ್ಯಾನರ್, ಫ್ಲೆಕ್ಸ್‌ಗಳನ್ನು ನೀಡುವ ಮೂಲಕ ಸಾರ್ವಜನಿಕರ ಮನವೊಲಿಸಲು ಇಲಾಖೆ ಸನ್ನದ್ಧವಾಗಿದೆ.

ಅಧಿಕೃತವಾಗಿ ಶಾಲೆ ಪ್ರಾರಂಭವಾಗುತ್ತಿದ್ದು, ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಮಕ್ಕಳ ಕಲರವ ಮೇಳೈಸಲಿದೆ. ಶಾಲೆ ಆರಂಭದ ದಿನವೇ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ, ಮೊದಲ ದಿನದಿಂದಲೇ ಮಕ್ಕಳು ಸಮವಸ್ತ್ರ, ಪಠ್ಯಪುಸ್ತಕದೊಂದಿಗೆ ಶಾಲೆಗೆ ಹಾಜರಾಗಬಹುದಾಗಿದೆ.ರಾಮಚಂದ್ರರಾಜೇ ಅರಸ್, ಡಿಡಿಪಿಐ