ವಿಜಯಪುರ: ಶಾಲಾ ಹಂತದಲ್ಲೇ ಚುನಾವಣೆ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದರಿಂದ ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಚೇತನಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.
ನಗರದ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಚುನಾವಣೆಯಲ್ಲಿ ಚುನಾವಣೆ ಅಧಿಕಾರಿಯಾಗಿ ವಿದ್ಯಾರ್ಥಿಗಳಿಂದ ನಾಮಪತ್ರ ಸ್ವೀಕರಿಸಿ ಅವರು ಮಾತನಾಡಿದರು.
ಮುಖ್ಯಶಿಕ್ಷಕ ಎ.ಎಚ್. ಕೊಳಮಲಿ ಮಾತನಾಡಿ, ಇವತ್ತಿನ ಮಕ್ಕಳೇ ನಾಳಿನ ಸುಭದ್ರವಾದ ರಾಷ್ಟ್ರ ನಿರ್ಮಿಸುವವರು. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ನಾಯಕತ್ವದ ಗುಣ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಲು ಸಾಧ್ಯ. ನಾಯಕತ್ವ ಗುಣಕ್ಕೆ ಶಾಲಾ ಸಂಸತ್ ಚುನಾವಣೆ ಅಡಿಪಾಯ ಎಂದು ತಿಳಿಸಿದರು.
ಸಮಾಜ ವಿಜ್ಞಾನದ ಶಿಕ್ಷಕ ಗಿರೀಶ ಬಿರಾದಾರ, ಸಿ.ಎಸ್. ವಾಲಿ, ಸಾಗರ ಕುಲಕರ್ಣಿ ಮತ್ತಿತರರಿದ್ದರು.