ಜಿಲ್ಲೆ

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ

ಆದರ್ಶ್. ಎಂ.ಕೆ.

ಮಡಿಕೇರಿ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ಅಭಿಪ್ರಾಯಪಟ್ಟರು.

ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಮಾಯಮುಡಿ ಕ್ಲಸ್ಟರ್‌ನ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಕಲಿಕಾ ಹಬ್ಬವು ಒಂದು. ಇದು ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಪಡಿಸಲು ಸಹಕಾರಿಯಾಗಿದೆ. ಕಲಿಕಾ ಹಬ್ಬ, ಗಣಿತ ಆಂದೋಲನ, ಪ್ರತಿಭಾ ಕಾರಂಜಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಾಯಕವಾಗಿದೆ. ಬಿಸಿಯೂಟದೊಂದಿಗೆ ಆರು ದಿನವೂ ಮೊಟ್ಟೆ, ಹಾಲು, ರಾಗಿ, ಸಿರಿಧಾನ್ಯವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ವಿದ್ಯಾರ್ಥಿ ವೇತನ, ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್ ಸೌಲಭ್ಯವನ್ನು ಕೂಡ ಕಲ್ಪಿಸುತ್ತಿದೆ. ಇದೆಲ್ಲವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಗುರಿ ಸಾಧಿಸಬೇಕೆಂದು ಎ.ಎಸ್.ಟಾಟು ಮೊಣ್ಣಪ್ಪ ಕರೆ ನೀಡಿದರು.

ಕಲಿಕಾ ಹಬ್ಬದ ವಸ್ತು ಪ್ರದರ್ಶನ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಪಠ್ಯೇತರ ಚಟುವಟಿಕೆ ಕೂಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಸ್ಟರ್‌ನ ಸಿಆರ್‌ಪಿ ಅರುಣ ಮಾತನಾಡಿದರು. ಮಾಯಮುಡಿ ಗ್ರಾ.ಪಂ ಸದಸ್ಯರಾದ ಸುಮಿತ್ರ, ನೋಡಲ್ ಅಧಿಕಾರಿ, ಡಯಟ್ ಉಪನ್ಯಾಸಕ ಹೇಮಂತ್, ವಿರಾಜಪೇಟೆ ತಾಲೂಕಿನ ಸಿಆರ್‌ಪಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚೆನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗಿರಿಜಾ, ಪೊನ್ನಪ್ಪಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಶೀಲ, ಮಾಯಮುಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಬಿ.ಸಿ.ವಾಣಿ, ನಲ್ಲೂರು ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಸಂಧ್ಯಾ, ಮಾಯಾಮುಡಿ ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ, ಬೆಸಗೂರು ಶಾಲೆಯ ಪ್ರಬಾರ ಮುಖ್ಯ ಶಿಕ್ಷಕ ಪ್ರತಾಪ್, ಸಿಆರ್‌ಪಿಗಳಾದ ಸೌಮ್ಯ, ಮುರುಗನ್, ವೆಂಕಟೇಶ್, ರಾಧಾ ಹಾಗೂ ಮಾಯಮುಡಿ ಕ್ಲಸ್ಟರ್‌ಗೆ ಸೇರಿದ ಆರು ಶಾಲೆಗಳ ಮುಖ್ಯ ಶಿಕ್ಷಕರುಗಳು, ಸಹ ಶಿಕ್ಷಕರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.