ದೇವನಹಳ್ಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಷ್ಠಿತ ಶಾಲೆಗೆ ಆಯ್ಕೆಯಾಗಿರುವ ಪ್ರತಿಭಾವಂತ ಮಕ್ಕಳಿಗೆ ಅಪರ ಜಿಲ್ಲಾಧಿಕಾರಿ ಸಂಗಪ್ಪ ಪ್ರಶಂಸನಾ ಪತ್ರ ವಿತರಿಸಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕಿ ಗಾಯಿತ್ರಿ ಹಾಗೂ ವಿದ್ಯಾರ್ಥಿಗಳ ಪಾಲಕರು ಇದ್ದರು. 
ಜಿಲ್ಲೆ

ಪ್ರತಿಷ್ಠಿತ ಶಾಲೆಗಳಿಗೆ 49 ವಿದ್ಯಾರ್ಥಿಗಳು ಆಯ್ಕೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಹತಾ ಪರೀಕ್ಷೆ ಮೂಲಕ ಪ್ರತಿಷ್ಠಿತ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ 49 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಶುಭ ಹಾರೈಸಿದರು.
ಪ್ರತಿಷ್ಠಿತ ಶಾಲೆಗೆ ಆಯ್ಕೆಯಾಗಿರುವ ಪ್ರತಿಭಾವಂತ ಮಕ್ಕಳು ಹಾಗೂ ಅವರ ಪಾಲಕರೊಂದಿಗೆ ದೇವನಹಳ್ಳಿ ತಾಲೂಕು ಬೀರಸಂದ್ರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಸರ್ಕಾರ ಪ್ರತಿಭಾವಂತ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡಬೇಕು ಇಂಥ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರ್ಹತಾ ಪರೀಕ್ಷೆ: ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ ಕಲ್ಪಿಸಲು ಶೇ.60 ಕ್ಕಿಂತ ಹೆಚ್ಚಿನ ಅಂಕಗಳಿಸಿ 5 ನೇ ತರಗತಿ ಉತ್ತೀರ್ಣರಾದ ಮಕ್ಕಳನ್ನು ಅರ್ಹತಾ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡದ 19 ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಜಾತಿಯ 30 ವಿದ್ಯಾರ್ಥಿಗಳು ಸೇರಿ 49 ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಸಂಗಪ್ಪ ತಿಳಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಶಾಲಾ ಪಾಠಗಳನ್ನು ನಿರಂತರವಾಗಿ ಅಭ್ಯಾಸ ಮಾಡಿ ಉನ್ನತ ಸ್ಥಾನಗಳನ್ನು ತಲುಪಬೇಕು ಎಂದು ಕಿವಿಮಾತು ಹೇಳಿದರು.

ಪಾಲಕರು ಸಹಕರಿಸಬೇಕು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರತಿಷ್ಠಿತ ಶಾಲೆಗಳಿಗ ದಾಖಲಾಗುತ್ತಿರುವ ಮಕ್ಕಳ ಶಿಕ್ಷಣದ ವಿಷಯವಾಗಿ ಪಾಲಕರು ಎಲ್ಲ ಬಗೆಯ ಸಹಕಾರ ನೀಡಬೇಕು. ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ನಿಟ್ಟಿನಲ್ಲಿ ಪಾಲಕರ ಸಹಕಾರ ಅತ್ಯವಶ್ಯಕ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮಾ ಹೇಳಿದರು.

ಪಾಲಕರು, ಮಕ್ಕಳ ಸಭೆ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮಾ ಮತ್ತಿತರ ಅಧಿಕಾರಿಗಳು ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಸಭೆಯಲ್ಲಿ ಮಾತುಕತೆ ನಡೆಸಿದರು, ಮಕ್ಕಳ ವಿದ್ಯಾಭ್ಯಾಸ ಅವರ ಮುಂದಿನ ಭವಿಷ್ಯದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಇದೇ ವೇಳೆ ಪ್ರತಿಷ್ಟಿತ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.