ಮೈಸೂರು: ಶಾಲೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ಕೀಳನಪುರದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶುಕ್ರವಾರ ಮಕ್ಕಳಿಗೆ ಸಿಹಿ ಹಾಗೂ ಹೂ ನೀಡಿ ಬರಮಾಡಿಕೊಳ್ಳಲಾಯಿತು.
ಹೂ, ಕಬ್ಬು, ಬಾಳೆ ಕಂದು ಕಟ್ಟಿ ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳನ್ನು ಮೆರವಣಿಗೆ ಮಾಡಲಾಯಿತು. ಕೈಯಲ್ಲಿ ವಿವಿಧ ಘೋಷಣಾ ಫಲಕ ಹಿಡಿದ ವಿದ್ಯಾರ್ಥಿಗಳು ಶಿಕ್ಷಣದ ಮಹತ್ವ ಸಾರಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಮೂಡಿಸಿದ ಜಾಗೃತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮಸ್ಥರಿಂದ ಮಕ್ಕಳಿಗೆ ಭೋಜನದ ವ್ಯವಸ್ಥೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶಾಲೆ ಪ್ರಾರಂಭದ ಹಿನ್ನೆಲೆಯಲ್ಲಿ ಒಂದನೇ ತರಗತಿಯ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಶಿಕ್ಷಕ ಮಾಲಂಗಿ ಸುರೇಶ್ ಮಾತನಾಡಿ, ಶಾಲೆ ಎಂದರೆ ಮಕ್ಕಳಿಗೆ ಒಂದು ರೀತಿಯಾಗಿ ಭಯದ ವಾತಾವರಣ ಇರುತ್ತದೆ. ಇದರಿಂದ ಅವರು ಶಾಲೆಗೆ ಬರಲು ಹಿಂಜರಿಯುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಭಯದ ವಾತಾವರಣ ನಿರ್ಮೂಲನೆ ಮಾಡಿ ಅವರು ಕಲಿಯಲು ಸೂಕ್ತ ವಾತಾವರಣ ನಿರ್ಮಾಣ ಮಾಡಿಕೊಡುವ ನಿಟ್ಟಿನಲ್ಲಿ ಇಂದು ನಮ್ಮ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು ಎಂದರು.
ರೈಲಿನ ಮಾದರಿ ಗೋಡೆ: ನಮ್ಮ ಶಾಲೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ. ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು ಮತ್ತು ಕಲಿಸು ಫೌಂಡೇಷನ್ ಸಹಕಾರದಲ್ಲಿ ಮಕ್ಕಳಿಗೆ ಎಲ್ಲ ರೀತಿಯಾಗಿ ಸೌಕರ್ಯ ಕಲ್ಪಿಸಲಾಗಿದೆ. ವಿಶೇಷ ಗ್ರಂಥಾಲಯ, ಕಂಪ್ಯೂಟರ್, ಆಟದ ಮೈದಾನ ನಿರ್ಮಿಸಲಾಗಿದೆ. ಶಾಲೆಯತ್ತ ಮಕ್ಕಳನ್ನು ಆಕರ್ಷಿಸಲು ರೈಲಿನ ಮಾದರಿಯಲ್ಲಿ ಶಾಲೆ ಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಮೈಸೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿವೇಕಾನಂದ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆ ಇಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ ಇರುತ್ತದೆ. ಅದನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹ ನೀಡಬೇಕು. ಅಷ್ಟೇ ಅಲ್ಲದೆ ಮಕ್ಕಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯರಾದ ನಾಗಣ್ಣ, ಬಿಆರ್‌ಸಿ ಮಹದೇವ್, ಶಿಕ್ಷಣ ಅಧಿಕಾರಿಗಳಾದ ಅನಂತರಾಜು, ಸುರೇಶ್, ಎಸ್‌ಡಿಎಂಸಿ ಸದಸ್ಯರಾದ ಮಲ್ಲು, ನಿಂಗಪ್ಪ, ಕಲಿಸು ಫೌಂಡೇಶನ್ ಅಧ್ಯಕ್ಷ ನಿಖಿಲೇಶ್, ಗ್ರಾಮದ ಮುಖಂಡ ಮಹದೇವಪ್ಪ, ಸಹ ಶಿಕ್ಷಕರಾದ ಮಂಜುಳಾ, ಸುವರ್ಣಮ್ಮ, ತಸ್ಪೀನಾ ಭಾನು, ಸುವರ್ಣಮ್ಮ ಮತ್ತಿತರರಿದ್ದರು.