ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಬೆಳಿಗ್ಗೆ ಇದ್ದಕ್ಕಿದ್ದಂತೆ ಹೆಜ್ಜೇನು ದಾಳಿ ನಡೆಸಿದ್ದು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪಾಲಿಟೆಕ್ನಿಕ್ ಒಳಾಂಗಣದ ಮೆಕಾನಿಕಲ್ ಲ್ಯಾಬ್ ಮುಂಭಾಗದಲ್ಲಿರುವ ಹಳೇ ಮರದಲ್ಲಿ ಹೆಜ್ಜೇನುಗೂಡು ಇದ್ದು, ಕೋತಿಗಳು ಮತ್ತು ಕಾಗೆಗಳು ಕಿತ್ತಾಟದ ಸಂದರ್ಭದಲ್ಲಿ ಮಾಡಿದ ಶಬ್ದಕ್ಕೆ ಹೆಜ್ಜೇನು ನೊಣಗಳು ಎದ್ದಿದ್ದು ಸಮೀಪದ ಶಾಲಾ ಕೊಠಡಿಗಳ ಬಳಿ ಇದ್ದವರ ಮೇಲೆ ದಾಳಿ ನಡೆಸಿವೆ. ಇದಕ್ಕೆ ವಿದ್ಯಾರ್ಥಿಗಳಾದ ಹರ್ಷ ವರ್ಧನ್, ಯೋಗೇಶ್, ದನುಷ್ ಕುಮಾರ್, ರ‍್ಹಾನ್, ಮುಸ್ಥಾಫ್, ವಿವೇಕ್ ಆರ್.ಎಚ್. ಗುರುಚರಣ್, ಭರತ್, ಶೌರ್ಯ, ಪ್ರಣತಿ, ಸಂದ್ಯಾ, ಆಜೇಯ್, ಕೃಷ್ಣಪ್ಪ, ರಾಫತ್, ಭರತ್, ಲಲಿತ್ ಕುಮಾರ್, ಕೋದಂಡ, ರೇವಂತ್, ಎಂ.ಡಿ.ನಿತಿನ್ ಅಸ್ವಸ್ಥಗೊಂಡಿದ್ದು ತಕ್ಷಣ ಸಮೀಪದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಚೇತರಿಸಿಕೊಂಡು ಮನೆಗೆ ವಾಪಸ್ ಆಗಿದ್ದಾರೆ.
ಇನ್ನು ಸಂದ್ಯಾ ಎಂಬ ವಿದ್ಯಾರ್ಥಿನಿ ತೀವ್ರ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿ ಬಿದಿದ್ದ ವಿದ್ಯಾರ್ಥಿನಿಯನ್ನು ನಗರದ ಡೆಕ್ಕನ್ ಆಸ್ಪತ್ರೆಗೆ ದಾಖಲಸಿ ಸೂಕ್ತ ಚಿಕಿತ್ಸೆ ನೀಡಿದ ನಂತರ ಆಕೆ ಚೇತರಿಸಿಕೊಂಡಿದ್ದು, ಮನೆಗೆ ವಾಪಸ್ಸಾಗಿದ್ದಾರೆ.