ಮೈಸೂರು: ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಕಲೆ, ಪ್ರತಿಭೆಯನ್ನು ಅನಾವರಣಗೊಳಿಸಿದರು.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿಯಿಂದ ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನ (ಕಾವಾ) ಆವರಣದಲ್ಲಿ ಭಾನುವಾರ ಕಲಾ ಜಾತ್ರೆಯೇ ತೆರೆದುಕೊಂಡಿತ್ತು.
ರಾಷ್ಟ್ರೀಯ ಕರಕುಶಲ ವಸ್ತು, ಲಲಿತಕಲೆ ಅಂಗವಾಗಿ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಕಲಾ ಶೀರ್ಷಿಕೆಯ ಪಯಣ, ಬ್ಲಾಸಮ್, ಲೋಕಾರ್ಪಣೆ, ಕೊನೆಯ ಸ್ಥಾನ ಇತ್ಯಾದಿ ಶೀಷಿಕೆಯ ಗ್ರಾಫಿಕ್ ಕಲೆ, ಅನ್ವಯ ಕಲೆ, ಛಾಯಾಚಿತ್ರ, ಸಾಂಪ್ರದಾಯಿಕ ಚಿತ್ರಕಲೆ, ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು, ಜೇಡಿ ಮಣ್ಣಿನ ಕಲಾಕೃತಿ ರಚನೆಯಲ್ಲಿ ತಮ್ಮ ನೈಪುಣ್ಯತೆ ತೆರೆದಿಟ್ಟವು.
ಅಲ್ಲದೆ ದೃಶ್ಯವಿದು ನಟಿಸಲು, ನಾದವಿದು ಆಲಿಸಲು, ಕಾವ್ಯವಿದು ವಾಚಿಸಲು, ನಾಟ್ಯವಿದು ನರ್ತಿಸಲು, ನಟನೆಯಿದು ನಟಿಸಲು, ಚಂದನ ವನದ ನಂದನವನಕ್ಕಿದೋ ಸ್ವಾಗತ ಎಂಬ ಶೀರ್ಷಿಕೆಯಲ್ಲಿ ಗಣ್ಯರನ್ನು ಸ್ವಾಗತಿಸಲಾಯಿತು. ಇದೇ ವೇಳೆ 39 ಕಲಾವಿದರನ್ನು ಸನ್ಮಾನಿಸಲಾಯಿತು.
ಪ್ರದರ್ಶನದ ಆಕರ್ಷಣೆ: ಪ್ರಸ್ತುತ ಸಮಾಜದಲ್ಲಿ 5ಜಿ ಜಗತ್ತಾಗಿದ್ದು, ಹುಟ್ಟಿದ ಮಕ್ಕಳಿಂದ ಹಿಡಿದು ಹಿರಿಯವರೆಗೂ ಮೊಬೈಲ್‌ನ ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗಿದ್ದಾರೆ. ಮುಂದೆ ಹೊಟ್ಟೆಯಲ್ಲಿರುವ ಮಗು ಸಹ 6ಜಿ ಕಾಲದ್ದಾಗಿದ್ದು, ಮೊಬೈಲ್ ಹಿಡಿದೇ ಹೊರಬರಲಿದೆ ಎಂಬಂತಹ ಕಲಾಕೃತಿ, ಸಾಮಾಜಿಕ ಜಾಲತಾಣ ಮನುಷ್ಯನನ್ನು ಆವರಿಸಿಕೊಂಡಿರುವುದನ್ನು ಬಿಡಿಸಿಟ್ಟಿತು.
ಸಾಮಾಜಿಕ ಜಾಲದ ಬಲೆಗೆ ಸಿಲುಕಿದ ಮನುಷ್ಯರು ಫೇಸ್‌ಬುಕ್. ಇನ್‌ಸ್ಟ್ಾಗ್ರಾಮ್, ಯೂ ಟ್ಯೂಬ್, ಎಕ್ಸ್ ಖಾತೆ ಸೆರಿದಂತೆ ನಾನಾ ಜಾಲತಾಣವೆಂಬ ಬಲೆಯಲ್ಲಿ ಸಿಲುಕುತ್ತಿವುದನ್ನು ಕಲಾಕೃತಿಗಳು ತೆರೆದಿಟ್ಟವು.
ಕರ್ನಾಟಕ ಕಲಾ ರತ್ನ ಪ್ರಶಸ್ತಿ ಪಡೆದಿರುವ ರೂಪ ವಸುಂಧರ ಅವರ ಒಣ ಎಲೆ, ಹೂವಿನಿಂದ ರಚಿಸಿರುವ ಚಿತ್ರಕಲೆ, ಮನುಷ್ಯ ತನ್ನ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಬಗೆಯ ಕುರಿತು ಕಲಾವಿದ ಎ.ಆರ್.ಮಂಜುನಾಥ್ ಅವರು ಚಿತ್ರಿಸಿರುವ ಕಲಾಕೃತಿಗಳು, ಪ್ರಸಿದ್ಧ ಸಾಹಿತಿಗಳು, ಮೈಸೂರು ಅರಮನೆ, ಜಯಮಾರ್ತಾಂಡ ಗೇಟ್, ನಂದಿ, ಚಾಮುಂಡಿ ಬೆಟ್ಟದ ಗೋಪುರ, ದೊಡ್ಡ ಗಡಿಯಾರ ಹಾಗೂ ಚಿತ್ರನಟರ ಸ್ಕೆಚ್ ಆರ್ಟ್ ಸೇರಿದಂತೆ ಹಲವು ಚಿತ್ರಗಳು ಗಮನ ಸೆಳೆದವು.
ವಿದ್ಯಾರ್ಥಿಗಳಿಂದ ಚಿತ್ರಿಸಿರುವ ಮಂಡಲ ಕಲೆ, ಬಾಲ್ಯಾವಸ್ಥೆಯಲ್ಲಿ ಆಟೋಟವಾಡುತ್ತಿರುವ ಮಕ್ಕಳ ಕ್ಯಾನ್ವಾಸ್ ಚಿತ್ರ, ಪೋಟ್ರೇಟ್ ಚಿತ್ರಗಳು ಮತ್ತು ಕಾರ್ಯಕ್ರಮದ ಆಕರ್ಷಣೆಯಲ್ಲೊಂದಾದ ಟೆರಾಕೋಟಾ ಭಿತ್ತಿ ಶಿಲ್ಪಕಲೆಯಲ್ಲಿ ಮಹಿಳೆ ವಿವಿಧ ವಿನ್ಯಾಸ, ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ಸೇರಿದಂತೆ ಇತರೆ ಕಲಾಕೃತಿಗಳು ನೋಡುಗರನ್ನು ಕ್ಷಣ ಕಾಲ ನಿಲ್ಲುವಂತೆ ಮಾಡಿತು.
ಸಾಂಪ್ರಾಯಿಕತೆಯತ್ತ ಬರುತ್ತಿಲ್ಲ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ತನ್ವೀರ್‌ಸೇಠ್ ಮಾತನಾಡಿ, ಪಾಲಕರು ಆಂಗ್ಲ ಭಾಷಾ ವ್ಯಾಮೋಹದಲ್ಲಿ ಮುಳುಗಿರುವುದರಿಂದಲೋ ಅಥವಾ ತಮ್ಮ ಮಕ್ಕಳನ್ನು ವೈದ್ಯ, ಇಂಜಿನಿಯರ್ ವೃತ್ತಿಯಲ್ಲಿ ನೋಡುವ ಹೆಬ್ಬಯಕೆಯಿಂದಾಗಿಯೋ ಸಾಂಪ್ರದಾಯಿಕ ಕಲೆಗಳತ್ತ ಹೆಚ್ಚು ಜನ ಹೋಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲಾ-ಕಾಲೇಜುಗಳು ಸಹ ಕೇವಲ ಪಾಠಕ್ಕೆ ಸೀಮಿತಗೊಂಡಿದ್ದು, ಕಲೆ ಮತ್ತು ಸಂಸ್ಕೃತಿ ಮೂಲಕ ಕಲಿಸುವಂತಾಗಬೇಕಿದೆ. ಆ ಮೂಲಕ ನಮ್ಮ ಕಲೆ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಲೆ ಮೇಲೆ ಅಭಿಮಾನವಿದ್ದಾಗ ಮಾತ್ರ ಸಮಾಜದಲ್ಲಿ ಬದುಕಲು ಸಾಧ್ಯ. ನಿಜವಾದ ಕಲೆ ಮತ್ತು ಸಂಸ್ಕೃತಿ ಜೀವನದ ಕಷ್ಟ-ಸುಖ ಮತ್ತು ಬದುಕಿನ ಏಳು ಬೀಳುಗಳನ್ನು ತಿಳಿಸಿಕೊಡುವುದರೊಂದಿಗೆ ಸರಿ ಮಾಡಿಕೊಳ್ಳಲು ಅವಕಾಶ ನೀಡಲಿದೆ. ಆದ್ದರಿಂದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಇದರ ಅರಿವನ್ನು ಮೂಡಿಸುವುದು ಮುಖ್ಯವೆಂದರು.
ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಪ್ರೊ.ಡಿ.ಮಹೇಂದ್ರ, ಮುಂಬೈನ ಅಂತಾರಾಷ್ಟ್ರೀಯ ಖ್ಯಾತಿಯ ಅನಿಮೇಷನ್ ಕಲಾವಿದ ವೈಭವ್ ಕುಮರೇಶ್, ಶಿಲ್ಪಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವೆಂಕಟಾಚಲಪತಿ, ಲಲಿತಕಲೆ ಉಪ ಸಮಿತಿ ಅಧ್ಯಕ್ಷ ರಘು ರಾಜೇ ಅರಸ್, ಕಾವಾ ಡೀನ್ ಎ.ದೇವರಾಜು, ಆಡಳಿತಾಧಿಕಾರಿ ನಿರ್ಮಲಾ ಎಸ್. ಮಠಪತಿ, ಸಮಿತಿ ಉಪಾಧ್ಯಕ್ಷರಾದ ಭಾಸ್ಕರ್, ರಾಜೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜು ಪ್ರಸಾದ್, ಕಾರ್ಯದರ್ಶಿ ಸೂರ್ಯ ಇತರರು ಇದ್ದರು.