ಬ್ಯಾಡಗಿ: ಸಾರ್ವಜನಿಕರಿಗೆ ಆಕಸ್ಮಿಕ ಆಪತ್ತುಗಳು ಎದುರಾದಾಗ ಪೊಲೀಸ್ ಹಾಗೂ ಸಹಾಯವಾಣಿಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಸಿಪಿಐ ಮಹಾಂತೇಶ ಲಂಬಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳುವಾಗ ರಸ್ತೆ ಸುರಕ್ಷತೆ ನಿಯಮ ಪಾಲಿಸಬೇಕು. 18 ವರ್ಷದ ಒಳಗಿನ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡುವಂತಿಲ್ಲ. ಒಂದು ವೇಳೆ ನಿಯಮಕ್ಕೆ ವಿರುದ್ಧವಾಗಿ ಚಾಲನೆ ಮಾಡಿದರೆ ದಂಡ ವಿಧಸಲಾಗುವುದು. ವಾಹನ ಚಾಲಕರು ತಮ್ಮ ಪರವಾನಗಿ, ವಾಹನ ವಿಮೆ, ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಸೇರಿದಂತೆ ರಸ್ತೆ ನಿಯಮಗಳಿಗೆ ಅನುಗುಣವಾಗಿ ವಾಹನ ಚಲಾಯಿಸಬೇಕು ಎಂದರು.
ಹಿರಿಯ ನಾಗರಿಕರ ರಕ್ಷಣೆಗೆ ಸರ್ಕಾರ ಕಾಯ್ದೆಗಳ ಮೂಲಕ ವಿಶೇಷ ಆದ್ಯತೆ ನೀಡಿದೆ. ಸಾರಿಗೆ ಬಸ್, ಮೂಲಸೌಲಭ್ಯ ಪಡೆಯುವ ಸರದಿ, ವಿವಿಧ ಯೋಜನೆ, ಬ್ಯಾಂಕ್‌ಗಳ ವ್ಯವಸ್ಥೆ ಇತ್ಯಾದಿಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಹಕ್ಕು, ರಕ್ಷಣೆಗಿರುವ ಕಾಯ್ದೆ ಹಾಗೂ ಸಹಾಯವಾಣಿ ಕುರಿತು ತಿಳಿವಳಿಕೆ ನೀಡಿದರು.
24 ಗಂಟೆಗಳ ಸಹಾಯವಾಣಿ: ಪಿಎಸ್‌ಐ ಮಂಜುನಾಥ ಕುಪ್ಪೇಲೂರ ಮಾತನಾಡಿ, ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು, ಮಕ್ಕಳು ಸೇರಿದಂತೆ ಎಲ್ಲರಿಗೂ ಸಹಾಯವಾಣಿ ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸಲಿದೆ. ಇದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಇಬ್ಬರು ನೌಕರರನ್ನು ನಿಯೋಜಿಸಲಾಗಿದೆ ಎಂದರು.
ಪಿಎಸ್‌ಐ ಎನ್.ಕೆ. ನಿಂಗೇನಹಳ್ಳಿ, ಎಎಸ್‌ಐ ಎಫ್.ಎಂ. ಖಾಜಿ, ಡಿ.ಎಚ್. ಪೂಜಾರ, ಲೋಕೇಶ ಲಮಾಣಿ, ಹನುಮಂತಪ್ಪ ಬೆಳಗೇರಿ, ಬಸವರಾಜ ಅಂಜುಟಗಿ, ಶ್ರೀಕಾಂತ ಪೂಜಾರ, ನಂದಿಗೌಡ್ರ, ಅಶ್ವಿನಿ ಕ್ಯಾತನಗೌಡ್ರ, ಪ್ರಾಂಶುಪಾಲ ಅವಿನಾಶ ಮೋತಿನ ಇದ್ದರು.