ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲ ಗ್ರಾಮಗಳಿಗೆ ಸೂಕ್ತ ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.
ಶಾಲಾ-ಕಾಲೇಜು ಹಾಗೂ ಕಚೇರಿಗೆ ತೆರಳಲು ಬಸ್ ಸಂಚಾರವಿಲ್ಲದ ಕಾರಣ ಸುತ್ತಿ ಬಳಸಿ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ತಮ್ಮ ಬಹುತೇಕ ಸಮಯವನ್ನು ಕೇವಲ ಪ್ರಯಾಣಕ್ಕಾಗಿಯೇ ಮೀಸಲಿಡುವ ಅನಿವಾರ್ಯತೆ ಎದುರಾಗಿದೆ.
ಮೈಸೂರಿನಿಂದ ಹೊಸಹುಂಡಿ ಮಾರ್ಗವಾಗಿ ಹಡಜನ, ಮಾರಶೆಟ್ಟಿಹಳ್ಳಿ, ಸಿಎಂ ಹುಂಡಿ, ಸಜ್ಜೆ ಹುಂಡಿ, ಜೆಂತಹಳ್ಳಿ, ಎಂಬಿ ಹಳ್ಳಿ, ಕಿರಾಳು ಗ್ರಾಮಗಳು ಬಸ್ ಸಮಸ್ಯೆ ಎದುರಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಸದರಿ ಮಾರ್ಗವಾಗಿ ಈ ಹಿಂದೆ ನಿತ್ಯ ಬೆಳಗ್ಗೆ ಹಾಗೂ ಸಂಜೆ ಮೂರು ಬಾರಿ ಬಸ್ ಸಂಚಾರ ಇತ್ತು. ಆದರೆ, ಕಳೆದ 15 ದಿನಗಳಿಂದ ಬಸ್ ಸಂಚಾರ ನಿಲ್ಲಿಸಲಾಗಿದೆ. ಹಾಗಾಗಿ, ಸಮಸ್ಯೆ ಎದುರಾಗಿದೆ ಎಂದು ಕಿರಾಳು ಗ್ರಾಮದ ಮುಖಂಡ ಗುರುಸ್ವಾಮಿ ದೂರಿದ್ದಾರೆ.
ಈ ಮಾರ್ಗದ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗಾಗಿ ಮೈಸೂರು ಹಾಗೂ ಹೊಸಹುಂಡಿಗೆ ಹೋಗುತ್ತಾರೆ. ನೂರಾರು ಉದ್ಯೋಗಿಗಳು, ಸಾರ್ವಜನಿಕರು ಮೈಸೂರಿಗೆ ಓಡಾಡುತ್ತಾರೆ. ಆದರೆ, ಕಳೆದ 15 ದಿನಗಳಿಂದ ಬಸ್ ಸಂಚಾರ ಇಲ್ಲದೆ ಎಲ್ಲರೂ ಪರದಾಡುವಂತಾಗಿದೆ. ಸದ್ಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ನಮ್ಮ ಮಾರ್ಗ 100ಕ್ಕೂ ಹೆಚ್ಚು ಮಕ್ಕಳು ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. 150ಕ್ಕೂ ಹೆಚ್ಚು ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಎಲ್ಲರೂ ಮೈಸೂರು ಹಾಗೂ ಹೊಸಹುಂಡಿಯಲ್ಲಿ ಓದುತ್ತಿದ್ದು, ನಿತ್ಯ ಸರ್ಕಾರಿ ಬಸ್‌ನಲ್ಲೇ ಓಡಾಡುತ್ತಿದ್ದರು. ಆದರೀಗ ಬಸ್ ಸಮಸ್ಯೆ ಎದುರಾಗಿದೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ದಯವಿಟ್ಟು ಸದರಿ ಮಾರ್ಗವಾಗಿ ಮತ್ತೆ ಬಸ್ ಸಂಚಾರ ಆರಂಭಿಸಬೇಕು ಎಂದು ಗುರುಸ್ವಾಮಿ ಒತ್ತಾಯಿಸಿದ್ದಾರೆ.