ಕಡಬ: ಸರ್ಕಾರಿ ಶಾಲಾ ಸಹಶಿಕ್ಷಕರೊಬ್ಬರು ಹೊಡೆದ ರಭಸಕ್ಕೆ ಶಾಲಾ ಬಾಲಕನ ತಲೆ ಪಕ್ಕದಲ್ಲಿದ್ದ ಕಪಾಟಿಗೆ ತಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಡಬ ಸಮೀಪದ ಪಿಜಕ್ಕಳ ಸರ್ಕಾರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾದ ಬಾಲಕ. ಶಿಕ್ಷಕ ಕುಳಿತುಕೊಳ್ಳುವ ಕುರ್ಚಿಯಲ್ಲಿ ಬಟ್ಟೆ ಇದ್ದುದ್ದನ್ನು ಗಮನಿಸಿದ ಶಿಕ್ಷಕ ಈ ವಿದ್ಯಾರ್ಥಿಯೇ ಇಟ್ಟಿರುವುದಾಗಿ ಸಂಶಯಿಸಿ ಬೆನ್ನಿಗೆ ಹೊಡೆದಿದ್ದಾರೆನ್ನಲಾಗಿದೆ. ಹೊಡೆತದ ರಭಸಕ್ಕೆ ಬಾಲಕನ ತಲೆ ಪಕ್ಕದಲ್ಲಿದ್ದ ಕಪಾಟಿಗೆ ತಾಗಿ ತಲೆ ಮುಂಭಾಗಕ್ಕೆ ಗಾಯವಾಗಿದೆ.
ಬಾಲಕನ ಹೆತ್ತವರು ಶಾಲಾಭಿವೃದ್ದಿ ಸಮಿತಿಯ ಗಮನಕ್ಕೆ ತಂದು ಬಳಿಕ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ಮಕ್ಕಳ ಸಹಾಯವಾಣಿಗೆ ಮಾಹಿತಿ ರವಾನಿಸಲಾಗಿದೆ. ಪೊಲೀಸರಿಗೂ ಮಾಹಿತಿ ರವಾನೆಯಾಗಿದ್ದು ಪರಿಶೀಲನೆಯ ಬಳಿಕ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಶಿಕ್ಷಕರ ವಿರುದ್ದ ಹಲವು ಆರೋಪಗಳು ಕೇಳಿ ಬರುತ್ತಿದ್ದು ಪೊಲೀಸರ ವಿಚಾರಣೆಯ ಬಳಿಕ ವಾಸ್ತವ ಸಂಗತಿ ತಿಳಿದು ಬರಲಿದೆ.