ಮಡಿಕೇರಿ: ಅಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಪ್ರಾಯೋಜಕತ್ವದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ರಾಷ್ಟ್ರಧ್ವಜವನ್ನು ತೆಲೆಕೆಳಗಾಗಿ ಹಿಡಿದಿದ್ದ ಘಟನೆ ನಡೆದಿದೆ. ಜತೆಗೆ ವಿದ್ಯಾರ್ಥಿಗಳಿಗೆ ನೀಡಿದ ರಾಷ್ಟ್ರಧ್ವಜಗಳು ಕೇಸರಿ ಮತ್ತು ಹಸಿರು ಬಣ್ಣಗಳು ವಿವಿಧತೆಯಿಂದ ಕೂಡಿತ್ತು.
’ಹರ್ ಘರ್ ತಿರಂಗಾ’ ಅಭಿಯಾನದ ಭಾಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜವನ್ನು ಪ್ರಾಂಶುಪಾಲರಾದ ಡಾ.ಸಿ.ಜಗತ್ ತಿಮ್ಮಯ್ಯರವರು ವಿತರಿಸಿದರು. ನಂತರ ಪೋಟೋ ಶೂಟ್‌ಗೆ ನಿಲ್ಲುವ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಕೇಸರಿ ಬಿಳಿ ಹಸಿರು ಭಾಗವಾಗಿ ಹಿಡಿಯುವ ಬದಲು, ಹಸಿರು, ಬಿಳಿ, ಕೇಸರಿಯಾಗಿ ಹಿಡಿದು ಪೋಟೊಗೆ ಪೋಸ್ ನೀಡಿದ್ದಾನೆ. ಜತೆಗೆ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ರಾಷ್ಟ್ರಧ್ವಜವು ಒಂದೇ ಬಣ್ಣಗಳಿಂದ ಕೂಡಿರದೇ ವಿವಿಧ ಬಣ್ಣಗಳಿಂದ ಕೂಡಿದ್ದು ಚಿತ್ರದಲ್ಲಿ ಅಭಾಸ ಮೂಡಿಸುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲರು, ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ತಮ್ಮ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು. ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜಕ್ಕೆ ಅಗೌರವ ತರುವ ರೀತಿಯಲ್ಲಿ ನಿಯಮಾನುಸಾರ ಮಡಚಿ ಶುಚಿತ್ವವಾಗಿ ಮನೆಗೆ ಕೊಂಡೊಯ್ಯಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಪ್ರಾದ್ಯಾಪಕ ಹಾಗೂ ಎನ್‌ಸಿಸಿ ಅಧಿಕಾರಿ ಡಾ.ಮೇಜರ್ ಬಿ.ರಾಘವ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಮಹದೇವಯ್ಯ, ಹಿಂದಿ ವಿಭಾಗದ ಪ್ರಾದ್ಯಾಪಕ ತಳವಾರ, ಗಣಿತ ವಿಭಾಗದ ಮುಖ್ಯಸ್ಥ ರಾಜೇಂದ್ರ ಹಾಗೂ ಎನ್‌ಸಿಸಿ, ಎನ್‌ಎಸ್‌ಎಸ್, ಕ್ರೀಡಾ ಹಾಗೂ ಇಸಿಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.