ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆಯನ್ನು ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಎಂ.ಡಿ.ಡಾ.ಲೋಹಿತ್ ಬಿಡುಗಡೆಗೊಳಿಸಿದರು. ಮುಖ್ಯಶಿಕ್ಷಕ ಚಂದ್ರಶೇಖರ್, ಶಿಕ್ಷಕರಾದ ಸಾವಿತ್ರಿ, ನವೀನ್‌ಕುಮಾರ್, ಎಚ್.ಕೆ.ರಮೇಶ್ ಇದ್ದರು. 
ಜಿಲ್ಲೆ

ವಿದ್ಯಾರ್ಥಿಮಿತ್ರ ಸಂಚಿಕೆ ಮಕ್ಕಳಿಗೆ ಅನುಕೂಲ

ಅಭಿನಯ್ ಎಚ್.ಎಂ

ಹುಣಸೂರು: ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ಹೊರತರುತ್ತಿರುವ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಕಾವೇರಿ ಚಾರಿಟೆಬಲ್ ಟ್ರಸ್ಟ್ ಮತ್ತು ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಲೋಹಿತ್ ಬಿಡುಗಡೆಗೊಳಿಸಿದರು.

ತಾಲೂಕಿನ ಹನಗೋಡು ಹೋಬಳಿ ದೊಡ್ಡಹೆಜ್ಜೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಜಯವಾಣಿ ದಿನಪತ್ರಿಕೆ ವಿದ್ಯಾರ್ಥಿಮಿತ್ರ ಸಂಚಿಕೆಯನ್ನು ಹೊರತರುತ್ತಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಸದುದ್ದೇಶವನ್ನು ಪತ್ರಿಕೆ ಹೊಂದಿರುವುದು ಶ್ಲಾಘನೀಯ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗಿರಿಜನ ವಿದ್ಯಾರ್ಥಿಗಳಿಗೂ ಇದರ ಉಪಯೋಗವಾಗುತ್ತಿರುವುದು ಸಂತಸದ ವಿಷಯ ಎಂದರು.

ಹಳ್ಳಿ ವಿದ್ಯಾರ್ಥಿಗಳು ದಡ್ಡರಲ್ಲ: ಹಳ್ಳಿಯಿಂದ ಬಂದ ವಿದ್ಯಾರ್ಥಿಗಳು ದಡ್ಡರೇನಲ್ಲ. ಬದಲಾಗಿ ಅವರು ಅವಕಾಶವಂಚಿತರಾಗಿದ್ದಾರೆ. ಅವರಲ್ಲೂ ಸಾಕಷ್ಟು ಪ್ರತಿಭೆ ಅಡಗಿದ್ದು, ಅನಾವರಣಗೊಳ್ಳಲು ಅವಕಾಶ ಬೇಕಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶಕ್ಕಾಗಿ ಕಾಯಬಾರದು. ಬದಲಾಗಿ ಸೃಷ್ಟಿಸಿಕೊಳ್ಳಬೇಕು. ಸಾಧಿಸುವ ಛಲ ಮತ್ತು ಸತತ ಪರಿಶ್ರಮದಿಂದ ಮಾತ್ರ ಇದು ಸಾಧ್ಯ. ಜೀವನದಲ್ಲಿ ಸಾಧನೆ ತೋರುವ ಮೂಲಕ ಹೆತ್ತವರನ್ನು ವೃದ್ಧಾಪ್ಯದಲ್ಲಿ ಕಾಪಾಡುವ ಹೊಣೆ ಎಲ್ಲರ ಮೇಲಿದೆ ಎಂದು ಕಿವಿಮಾತು ಹೇಳಿದರು.

ಶಾಲೆ ಮುಖ್ಯಶಿಕ್ಷಕ ಚಂದ್ರಶೇಖರ್ ಮಾತನಾಡಿ, ಕಾವೇರಿ ಆಸ್ಪತ್ರೆಯ ಎಂ.ಡಿ.ಡಾ.ಲೋಹಿತ್ ಈಗಾಗಲೇ ತಾಲೂಕಿನಾದ್ಯಂತ ಮನೆಮಾತಾಗಿದ್ದಾರೆ. ಅವರಿಂದ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲ ದೊರಕಿರುವುದು ಸಂತಸದ ವಿಷಯ. ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಸಂಚಿಕೆ ವಿದ್ಯಾರ್ಥಿಗಳ ಕೈಹಿಡಿಯುವಲ್ಲಿ ಸಂಶಯವಿಲ್ಲ ಎಂದರು.

ಕಾರ್ಕ್ರಮದಲ್ಲಿ ಶಿಕ್ಷಕರಾದ ನವೀನ್‌ಕುಮಾರ್, ಎಂ.ಸಾವಿತ್ರಿ, ಎಚ್.ಕೆ.ರಮೇಶ್, ಎಂ.ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.