ಜಿಲ್ಲೆ

ಮಂಗಳೂರು ಅಯ್ಯಪ್ಪ ವೃತಧಾರಿ ವಿದ್ಯಾರ್ಥಿಗೆ ಹಲ್ಲೆ

ಮಂಗಳೂರು: ನಗರದ ಕಪಿತಾನಿಯೋ ಶಾಲೆಯೊಂದರ 8ನೇ ತರಗತಿಯ ಅಯ್ಯಪ್ಪ ಸ್ವಾಮಿ ವ್ರತಧಾರಿ ವಿದ್ಯಾರ್ಥಿನಿಯೊಬ್ಬನಿಗೆ ಮಂಗಳವಾರ ಸಂಜೆ ಹಿರಿಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ.


8ನೇ ತರಗತಿಯ ವಿದ್ಯಾರ್ಥಿ ಮತ್ತು 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಶಾಲೆಯಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಶಿಕ್ಷಕರ ಗಮನಕ್ಕೆ ಬಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದರು. ಮಂಗಳವಾರವೂ ಇದೇ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು 9ನೇ ತರಗತಿ ಇಬ್ಬರು ವಿದ್ಯಾರ್ಥಿಗಳು 8ನೇ ತರಗತಿಯ ಅಯ್ಯಪ್ಪ ವೃತಧಾರಿ ವಿದ್ಯಾರ್ಥಿಗೆ ‘ನಿನ್ನನ್ನು ಹೊರಗೆ ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಅದರಂತೆ ವಿದ್ಯಾರ್ಥಿ ಸಂಜೆ ಶಾಲೆ ಬಿಟ್ಟ ಬಳಿಕ ಬಸ್‌ಗಾಗಿ ತಂಗುದಾಣದಲ್ಲಿ ಕಾಯುತ್ತಿದ್ದಾಗ 9ನೇ ತರಗತಿಯ 4ಮಂದಿ ವಿದ್ಯಾರ್ಥಿಗಳು ಏಕಾಏಕಿ ಬಂದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳೀಯರು ಬಂದು ತಡೆದಿದ್ದು, ಗಾಯಗೊಂಡ ವಿದ್ಯಾರ್ಥಿಯನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೆಲ ಯುವಕರು ಸ್ಥಳದಲ್ಲಿ ಜಮಾಯಿಸಿದ್ದರು. ಘಟನಾ ಸ್ಥಳಕ್ಕೆ ಕಂಕನಾಡಿ ನಗರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ವಿದ್ಯಾರ್ಥಿಗಳು ವಶಕ್ಕೆ: ವಿದ್ಯಾರ್ಥಿಗೆ ಹಲ್ಲೆಗೈದ ಇಬ್ಬರು ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.