ಜಿಲ್ಲೆ

ನೆಲಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಭಟ್ಕಳ: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೆಲಬಾವಿಗೆ ಬಿದ್ದು ಮೃತಪಟ್ಟ ಘಟನೆ ಪಟ್ಟಣದ ತಾಪಂ ಎದುರು ಬುಧವಾರ ನಡೆದಿದೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗಾಣದಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (14) ಮೃತಪಟ್ಟ ದುರ್ದೈವಿ. ಮೂತ್ರ ವಿಸರ್ಜನೆಗೆಂದು ಹೋದಾಗ ಘಟನೆ ನಡೆದಿದೆ.

ಗಾಣದಾಳ ಶಾಲೆಯ 100 ವಿದ್ಯಾರ್ಥಿಗಳು 13 ಶಿಕ್ಷಕರೊಂದಿಗೆ ಪ್ರವಾಸಕ್ಕೆಂದು ಎರಡು ಬಸ್‌ಗಳಲ್ಲಿ ಬಂದಿದ್ದರು. ಬುಧವಾರ ಬೆಳಗ್ಗೆ ಜೋಗ ಜಲಪಾತ ವೀಕ್ಷಿಸಿ ಅಲ್ಲಿಂದ ಕೊಲ್ಲೂರಿಗೆ ತೆರಳುತ್ತಿದ್ದರು. ಮಾರ್ಗ ಮಧ್ಯ ಭಟ್ಕಳದಲ್ಲಿ ಮಾತ್ರೆ ಖರೀದಿಸಲು ಔಷಧ ಅಂಗಡಿ ಬಳಿ ಬಸ್ ನಿಲ್ಲಿಸಲಾಗಿತ್ತು.

ಕೆಲ ಬಾಲಕರು ಮೂತ್ರ ವಿಸರ್ಜನೆಗೆಂದು ಔಷಧ ಅಂಗಡಿ ಹಿಂಬದಿಯ ಖುಲ್ಲಾ ಜಾಗಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕತ್ತಲಾಗಿದ್ದರಿಂದ ತಡೆಗೋಡೆ ಇಲ್ಲದ ತೆರೆದ ಬಾವಿಗೆ ಬಾಲಕ ಬಿದ್ದಿದ್ದಾನೆ. ಜತೆಗಿದ್ದ ಬಾಲಕರು ಕೂಗಿದ್ದರಿಂದ ಸ್ಥಳೀಯರು ದೌಡಾಯಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.