ನರಗುಂದ: ಕೇವಲ ಅರ್ಧ ಗಂಟೆ ಕಳೆದಿದ್ದರೆ ಸಾಕಾಗಿತ್ತು. ಆ ಯುವಕ ಕಾಲೇಜ್‌ನ ಕೊಠಡಿಯೊಳಗೆ ಕುಳಿತು ಪಾಠ ಕೇಳುತ್ತಿದ್ದ. ಆದರೆ, ಸರ್ಕಾರದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಿಲ್ಲುವುದಕ್ಕೂ ಜಾಗವಿಲ್ಲದ ಕಾರಣ ಬಸ್‌ನಿಂದ ಬಿದ್ದು ಪ್ರಾಣವನ್ನೇ ಕಳೆದುಕೊಂಡ ಘಟನೆ ತಾಲೂಕಿನ ಕೊಣ್ಣೂರ ಬಸ್ ನಿಲ್ದಾಣದ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಪಟ್ಟಣದ ಶ್ರೀಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ, ತಾಲೂಕಿನ ಕೊಣ್ಣೂರ ಜನತಾ ಪ್ಲಾಟ್ ಬಡಾವಣೆ ನಿವಾಸಿ ರಾಘವೇಂದ್ರ ಫಕೀರಪ್ಪ ಮಣಿಕಟ್ಟಿ (21) ಮೃತಪಟ್ಟ ದುರ್ದೈವಿ.
ಬಿಎ ಅಂತಿಮ ವರ್ಷದ 5ನೇ ಸೆಮಿಷ್ಟರ್ ಓದುತ್ತಿದ್ದ ರಾಘವೇಂದ್ರ ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಕೊಣ್ಣೂರ ಬಸ್ ನಿಲ್ದಾಣದಿಂದ ನರಗುಂದಕ್ಕೆ ಆಗಮಿಸುತ್ತಿದ್ದ. ಬೆಳಗ್ಗೆ 9 ಗಂಟೆಗೆ ಕಾಲೇಜ್‌ನಲ್ಲಿ ಸೆಮಿನಾರ್ ಇರುವುದರಿಂದ ರಾಮದುರ್ಗ-ಹೊಸಪೇಟಿ ಬಸ್‌ಗೆ ಹತ್ತಿದ್ದಾನೆ. ಆದರೆ, ಇದೇ ಸಮಯಕ್ಕೆ ಕೊಣ್ಣೂರ ಸುತ್ತ ಮುತ್ತಲಿನ ವಿವಿಧ ಗ್ರಾಮಗಳ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಹತ್ತಿದ್ದರಿಂದ ಬಸ್‌ನಲ್ಲಿ ನಿಲ್ಲುವುದಕ್ಕೂ ಜಾಗವಿಲ್ಲದ ಕಾರಣ ಮುಂದಿನ ದ್ವಾರಬಾಗಿಲ ಬಳಿ ನಿಂತಿದ್ದನು. ಬಸ್ ಸಂಚರಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ಬಸ್‌ನ ಹಿಂಬದಿ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಅಪಘಾತದಿಂದಾಗಿ ಯುವಕನ ತಲೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಶಕ್ತಿ ಯೋಜನೆಯ ಪರಿಣಾಮ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿಪರೀತವಾಗಿದೆ. ಅಲ್ಲದೆ, ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯಗಳನ್ನು ಕಲ್ಪಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಶಾಲಾ, ಕಾಜೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕೊಣ್ಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮೃತನ ತಂದೆ ಫಕೀರಪ್ಪ ಮಣಿಕಟ್ಟಿ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಸ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಕ್ತಿ ಯೋಜನೆ ಜಾರಿಯಾದಾಗಿನಿಂದಲೂ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಆಗುತ್ತಿರುವ ಹಿಂಸೆ ಯಾರಿಗೂ ಹೇಳತೀರದು. ಅವೈಜ್ಞಾನಿಕ ಯೋಜನೆ ಬಡವರಿಗೆ ಅನುಕೂಲವಾದರೂ ಅಮಾಯಕ ವಿದ್ಯಾರ್ಥಿಗಳ ಪ್ರಾಣಕ್ಕೆ ಕಂಟಕವಾಗಿ ಪರಿಣಿಮಿಸಿದೆ. ವಿಪರೀತ ಜನಜಂಗುಳಿಯಿಂದ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆ, ಕಾಲೇಜ್ ಹಾಗೂ ಮನೆಗಳಿಗೆ ತೆರಳುತ್ತಿಲ್ಲ. ಇದರಿಂದ ಪಾಲಕರಿಗೂ ಸಾಕಷ್ಟು ಆತಂಕ ಮೂಡಿಸಿದೆ. ಶಾಲಾ, ಕಾಲೇಜ್ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸದಿದ್ದರೆ ಸಮಸ್ಯೆಗೆ ಮತ್ತಷ್ಟು ಬಲ ನೀಡಿದಂತಾಗುತ್ತದೆ. ಪ್ರೊ. ಬಿ.ಸಿ. ಹನುಮಂತಗೌಡ್ರ, ಕಸಾಪ ತಾಲೂಕು ಅಧ್ಯಕ್ಷ