ಜಿಲ್ಲೆ

ತರಗತಿಗೆ ಗೈರಾಗಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ: ಶಾಲೆಗೆ ನೋಟಿಸ್

ಎನ್.ಎಲ್. ಶಿವಮಾದು

ಬೆಂಗಳೂರು: ಸುಂಕದಕಟ್ಟೆ ಪೈಪ್‌ಲೈನ್ ರಸ್ತೆಯಲ್ಲಿರುವ ಖಾಸಗಿ ಶಾಲೆಯ ವಿದ್ಯಾರ್ಥಿಯು ಶಾಲೆಗೆ ಗೈರು ಹಾಜರಾಗಿದೆ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದ ಶಿಕ್ಷಕರು ಹಾಗೂ ಪ್ರಾಂಶುಪಾಲರಿಗೆ ಶಾಲಾ ಶಿಕ್ಷಣ ಇಲಾಖೆಯು ನೋಟಿಸ್ ಜಾರಿ ಮಾಡಿದೆ.

5ನೇ ತರಗತಿಯ ವಿದ್ಯಾರ್ಥಿಯು ಎರಡು ದಿನ ಶಾಲೆಗೆ ಗೈರು ಹಾಜರಾಗಿತ್ತು ಎಂಬ ಕಾರಣಕ್ಕೆ ಮಗುವಿಗೆ ಹಲ್ಲೆ ಮಾಡಿದ್ದಾರೆ. ಇದರಿಂದ ಮಗುವು ವಿಚಿತ್ರವಾಗಿ ವರ್ತಿಸುತ್ತಿದೆ ಎಂದು ಪಾಲಕರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಈ ಆಧಾರದಲ್ಲಿ ಶಿಕ್ಷಣ ಇಲಾಖೆಯ ಉತ್ತರ ವಲಯದ ಉಪ ನಿರ್ದೇಶಕರು (ಡಿಡಿಪಿಐ) ಹಾಗೂ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಚಲನವಲನಗಳನ್ನು ತಿಳಿಯಲು ಶಾಲೆಯಲ್ಲಿವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಸ್ವತಃ ಮಗು ಮತ್ತು ಪಾಲಕರನ್ನು ಕೂಡ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಎ್ಐಆರ್ ದೂರುಗಳಲ್ಲಿನ ಅಂಶಗಳನ್ನು ಸಹ ತಿಳಿಯಲಾಗಿದೆ. ಈ ಎಲ್ಲ ಆಧಾರದಲ್ಲಿ ಶಾಲೆ ಮಾನ್ಯತೆಯನ್ನು ರದ್ದುಗೊಳಿಸಬೇಕಾ ಅಥವಾ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿಳಿಯಲು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ವಲಯ ಉಪ ನಿರ್ದೇಶಕ ಅಂಜನಪ್ಪ ಕೆ.ಜಿ. ಅವರು ತಿಳಿಸಿದ್ದಾರೆ.

ವೈದ್ಯಕೀಯ ವರದಿ ಆಧಾರದಲ್ಲಿ ಕ್ರಮ:

ಮಗುವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದೆ. ಆದರೆ, ಇನ್ನೂ ವರದಿ ನೀಡಿಲ್ಲ. ವರದಿ ಆಧಾರದಲ್ಲಿ ಶಾಲೆ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಮಗುವು ಪ್ರತಿ ಅರ್ಧ ಗಂಟೆ/ ಮುಕ್ಕಾಲು ಗಂಟೆಗೆ ಒಮ್ಮೆ ಸುಮ್ಮನೆ ಕಿರಚುತ್ತದೆ ಎಂದು ಪಾಲಕರು ಹೇಳುತ್ತಿದ್ದಾರೆ. ಆದ್ದರಿಂದ ಮಗುವಿಗೆ ಯಾವ ರೀತಿಯ ಸಮಸ್ಯೆಯಾಗಿದೆ ಎಂದು ತಿಳಿಯಲಾಗುತ್ತಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದೂರು

ಮಗುವಿನ ಮೇಲೆ ಹಲ್ಲೆ ನಡೆಸಿರುವ ಶಿಕ್ಷಕರು ಮತ್ತು ಪ್ರಾಂಶುಪಾಲರ ಮೇಲೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಇಲಾಖಾ ನಿಯಮಾನುಸಾರ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಕೈಗೊಂಡ ಕ್ರಮವ ವರದಿಯನ್ನು ಆಯೋಗಕ್ಕೆ ಒಂದು ವಾರದೊಳಗೆ ಸಲ್ಲಿಸುವಂತೆ ಆಯೋಗದ ಅಧ್ಯಕ್ಷರು ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.