ಕ್ಯಾನ್ಸರ್‌ಗೆ ತುತ್ತಾಗಿರುವ ಕೃತಿಕ್ ಕುಟುಂಬಕ್ಕೆ ಕಲಾವಿದೆ ಪ್ರಜ್ಞಾ ನೆರವು ಹಸ್ತಾಂತರಿಸಿದರು.  
ಜಿಲ್ಲೆ

ಕ್ಯಾನ್ಸರ್ ರೋಗಿಗೆ ವಿದ್ಯಾರ್ಥಿನಿ ನೆರವು

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೋಟ

ಇಲ್ಲಿನ ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂದಟ್ಟು ಪರಿಸರದ ಈ ಹುಡುಗಿಯೊಬ್ಬಳು ತನ್ನ ಕಲೆಯಿಂದ ದೊರೆತ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಸರ್ವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಎಂಎಸ್ಸಿ ವಿದ್ಯಾರ್ಥಿನಿ ಕೋಟತಟ್ಟು ಹಂದಟ್ಟು ಪ್ರಜ್ಞಾ ಗೀತಾ ಪೂಜಾರಿ ಬಿಡಿಸಿದ ಅನೇಕ ಚಿತ್ರಗಳನ್ನು ಮಾರಾಟ ಮಾಡಿದ್ದು, ಇದರಿಂದ ದೊರೆತ 10 ಸಾವಿರ ರೂ. ಆದಾಯವನ್ನು ಕ್ಯಾನ್ಸರ್‌ಗೆ ತುತ್ತಾಗಿರುವ ಕೋಟತಟ್ಟು ಬಾರಿಕೆರೆಯ ಕೃತಿಕ್ ಗಾಣಿಗ ಅವರ ಚಿಕಿತ್ಸೆಗೆ ನೀಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೃತಿಕ್‌ಗೆ ಆರ್ಥಿಕ ಸಹಾಯದ ಅವಶ್ಯಕತೆ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದುಕೊಂಡ ಪ್ರಜ್ಞಾ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಗಣ್ಯರ ಚಿತ್ರದಿಂದ ಪ್ರಸಿದ್ಧಿ

ಪ್ರಜ್ಞಾ ಭರತನಾಟ್ಯ ಕಲಾವಿದೆಯಾಗಿದ್ದು, ರಂಗೋಲಿ ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಗಣ್ಯವ್ಯಕ್ತಿಗಳ ಚಿತ್ರ ರಚಿಸುವ ಮೂಲಕ ಪ್ರಸಿದ್ಧಿ ಗಳಿಸಿದ್ದು, ನಟ, ರಂಗಕರ್ಮಿ ದೊಡ್ಡಣ್ಣ ಅವರು ಮೆಚ್ಚುಗೆ ಸೂಚಿಸಿದ್ದರು.

ಪ್ರತಿಯೊಬ್ಬರಲ್ಲೂ ಸಾಮಾಜಿಕ ಕಳಕಳಿ ಹುಟ್ಟಿದರೆ ಬಡ ಕುಟುಂಬಗಳಿಗೆ ನೆರವಾಗಲು ಸಾಧ್ಯ. ಕಲಾವಿದೆ ಪ್ರಜ್ಞಾ ಅವರಿಗೆ ದೇವರು ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ. -ರಾಮ ಗಾಣಿಗ (ಕೃತಿಕ್‌ನ ಅಜ್ಜ) ಕೋಟತಟ್ಟು ನನ್ನ ಮಗಳಿಗೆ ಹೀಗೊಂದು ಚಿಂತನೆ ಮೂಡಿದ್ದು ತುಂಬಾ ಹೆಮ್ಮೆಯಾಗಿದೆ. ಈ ರೀತಿಯ ಕಾರ್ಯ ಎಲ್ಲರಿಗೂ ಮಾದರಿಯಾಗಲಿ. -ಗೀತಾ ಪೂಜಾರಿ ಹಂದಟ್ಟು ಕೋಟ